Menu

ನಮ್ಮ ಮೆಟ್ರೊ ಪಿಂಕ್‌ ಲೈನ್‌ ಆ.15ಕ್ಕೆ ಸಂಚಾರಕ್ಕೆ ಮುಕ್ತ

ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗ ಆಗಸ್ಟ್ 15 ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ರೈಲುಗಳ ಸಂಚಾರ ಪ್ರಾರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪಿಂಕ್ ಲೈನ್ ಮೆಟ್ರೋ ಗಂಟೆಗೆ 90 ಕಿಮೀ ವೇಗಕ್ಕೆ ಅನುಮತಿ ಸಿಕ್ಕಿದೆ. ಕಾಳೇನ ಅಗ್ರಹಾರ-ತಾವರೆಕೆರೆ ಮಾರ್ಗ ಮೊದಲಿಗೆ ಸಂಚಾರಕ್ಕೆ ಮುಕ್ತವಾಗಲಿದೆ.  ಕೇಂದ್ರ ಸರ್ಕಾರದ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆಯು ಈಗಾಗಲೇ ಅಧಿಕೃತ ‘ಸ್ಪೀಡ್ ಸರ್ಟಿಫಿಕೇಟ್ (ವೇಗ ಪ್ರಮಾಣ ಪತ್ರ)’ ನೀಡಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದಿದ್ದ ಪ್ರಾಯೋಗಿಕ ಸಂಚಾರ ಪರೀಕ್ಷೆಗಳು ಯಶಸ್ವಿಯಾಗಿದ್ದು, ಬಿಎಂಆರ್‌ಸಿಎಲ್ ಅಧಿಕಾರಿಗಳು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ಅಂತಿಮ ಒಪ್ಪಿಗೆ ಮತ್ತು ಪರಿಶೀಲನೆ ನಿರೀಕ್ಷೆಯಲ್ಲಿದ್ದಾರೆ.

ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.25 ಕಿ.ಮೀ ವಿಸ್ತೀರ್ಣ ಹೊಂದಿರುವ ಈ ಪಿಂಕ್ ಲೈನ್‌ನಲ್ಲಿ 18 ಮೆಟ್ರೋ ನಿಲ್ದಾಣಗಳಿವೆ. 12 ಅಂಡರ್​ಗ್ರೌಂಡ್ ಹಾಗೂ 6 ಎಲಿವೇಟೆಡ್ ನಿಲ್ದಾಣಗಳು ಸೇರಿವೆ. ಆಗಸ್ಟ್ 15 ರಂದು ಬಿಎಂಆರ್‌ಸಿಎಲ್ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗ ಸಾರ್ವಜನಿಕರಿಗೆ ತೆರೆಯಲಿದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಗೊಟ್ಟಿಗೆರೆ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ ಹಾಗೂ ತಾವರೆಕೆರೆ ಸೇರಿದಂತೆ 6 ನಿಲ್ದಾಣಗಳು ಇವೆ. ಜಯದೇವ ಆಸ್ಪತ್ರೆಯ ಇಂಟರ್‌ಚೇಂಜ್ ನಿಲ್ದಾಣವು ಪ್ರಯಾಣಿಕರಿಗೆ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ ಬದಲಿಸಲು ಅನುಕೂಲ ಕಲ್ಪಿಸಲಿದೆ.

7.5 ಕಿ.ಮೀ ಮಾರ್ಗವು ಸಂಚಾರಕ್ಕೆ ಮುಕ್ತವಾದರೆ ಬೆಂಗಳೂರು ಮೆಟ್ರೋ ಜಾಲದ ಒಟ್ಟು ಉದ್ದ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಬನ್ನೇರುಘಟ್ಟ ಮುಖ್ಯರಸ್ತೆಯ ಸುತ್ತಮುತ್ತಲಿನ ಟ್ರಾಫಿಕ್ ಸಮಸ್ಯೆ ಮತ್ತು ವಾಯುಮಾಲಿನ್ಯಕ್ಕೆ ತಡೆಯಾಗಲಿದೆ. 13.76 ಕಿ.ಮೀ ವಿಸ್ತೀರ್ಣದ 12 ಅಂಡರ್​ಗ್ರೌಂಡ್ ನಿಲ್ದಾಣಗಳ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ವರ್ಷದ ಅಂತ್ಯ ವೇಳೆಗೆ ಸಂಪೂರ್ಣ ಪಿಂಕ್ ಲೈನ್ ಸಂಚಾರಕ್ಕೆ ಮುಕ್ತಗೊಲ್ಳಲಿದೆ.

Related Posts

Leave a Reply

Your email address will not be published. Required fields are marked *