Wednesday, September 30, 2026
Menu

MRPL ನಲ್ಲಿ ಸ್ಫೋಟ: ಒಬ್ಬರಿಗೆ ಗಂಭೀರ ಗಾಯ, ನಡುಗಿದ ಮನೆಗಳು, ಒಡೆದ ಗಾಜುಗಳು, ಸ್ಥಳೀಯರ ಪ್ರತಿಭಟನೆ

ಮಂಗಳೂರಿನಲ್ಲಿರುವ MRPL ಆವರಣದಲ್ಲಿ ಬುಧವಾರ ಸ್ಫೋಟ ಸಂಭವಿಸಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ, ಆರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಸ್ಪೋಟದ ತೀವ್ರತೆಗೆ ಜೋಕಟ್ಟೆ ಸುತ್ತಮುತ್ತ ಮನೆ, ಕಟ್ಟಡಗಳು ನಡುಗಿವೆ.

ಸ್ಫೋಟದ ತೀವ್ರತೆಗೆ ಸಮೀಪದ ಜೋಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆ, ಕಟ್ಟಡಗಳು ನಡುಗಿದ ಅನುಭವ ಆಗಿದೆ. ಮತ್ತೊಂದೆಡೆ ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸ್ಫೋಟದ ಅನುಭವವಾಗಿದೆ. ಆದರೆ ಯಾವುದೇ ಹಾನಿಯಾಗಿಲ್ಲ ಎಂದು ವಿಮಾನ ನಿಲ್ದಾಣದ ಪಿಆರ್​​ಒ ಮಾಹಿತಿ ನೀಡದ್ದಾರೆ.

ಎಂಆರ್‌ಪಿಎಲ್‌ನ ಸಿಹೆಚ್‌ಟಿ ಘಟಕದಲ್ಲಿ ಸ್ಫೋಟದ ಬಳಿಕ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳವು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಘಟಕದ ಒಳಗಡೆ ಕರ್ತವ್ಯದಲ್ಲಿದ್ದ ರಾಜೇಶ್ ಬ್ಯಾಪ್ಟಿಸ್ಟ್ ಎಂಬವರು ಶೇ. 35ರಷ್ಟು ಸುಟ್ಟ ಗಾಯಗಳಿಂದ ನಲುಗಿದ್ದು, ಅವರನ್ನು ಶ್ರೀನಿವಾಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕಚೇರಿಯಲ್ಲಿದ್ದ ಆರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಹಾಗೂ ಎಂಆರ್‌ಪಿಎಲ್ ಸಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾಡಳಿತದ ಸೂಚನೆಯನ್ವಯ ವಿಮಾನ ನಿಲ್ದಾಣ ಪ್ರಾಧಿಕಾರವು ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರಮುಖ ಉಪಕರಣಗಳು ಹಾಗೂ ವ್ಯವಸ್ಥೆಗಳ ಕಾರ್ಯಾಚರಣಾ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ತಪಾಸಣೆಗಳನ್ನು ನಡೆಸಿದೆ.

ಎಂಆರ್‌ಪಿಎಲ್ ಸಮೀಪದ ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ, ಗ್ರಂಥಾಲಯ, ಅಂಗನವಾಡಿ ಹಾಗೂ ಸುತ್ತಮುತ್ತಲಿನ ನೂರಾರು ಮನೆಗಳ ಬಾಗಿಲು-ಕಿಟಕಿ ಗಾಜುಗಳು ಚೂರಾಗಿ ಬಿದ್ದಿವೆ. ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಎಂಆರ್‌ಪಿಎಲ್ ಪ್ರವೇಶ ದ್ವಾರದ ಬಳಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಸದಸ್ಯ ಫಯಾಜ್ ಮಾತನಾಡಿ, ಭೂಕಂಪವಾದಂತೆ ಭಾರಿ ಸ್ಫೋಟದ ಸದ್ದು ಕೇಳಿಸಿತು. ಜೋಕಟ್ಟೆಯ ಪಂಚಾಯತ್, ಗ್ರಂಥಾಲಯ, ಶಾಲೆಗಳ ಕಿಟಕಿ ಗಾಜುಗಳು ಪುಡಿಯಾಗಿವೆ. ಕಂಪನಿಯವರು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನಿರಂತರ ಮಾಲಿನ್ಯ ಹಾಗೂ ಅಪಾಯದ ನೆರಳಿನಲ್ಲಿ ಬದುಕುತ್ತಿರುವ ಊರಿನ ಜನರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡರಾದ ಮುನೀರ್ ಕಾಟಿಪಳ್ಳ, ಪರ್ವೇಜ್ ಅಲಿ ಸೇರಿದಂತೆ ಪ್ರತಿಭಟನಾಕಾರರು ಸ್ಥಳಕ್ಕೆ ಧಾವಿಸಿ ಕಂಪನಿಯ ಬೇಜವಾಬ್ದಾರಿಯನ್ನು ಖಂಡಿಸಿದರು. ಜೋಕಟ್ಟೆಯ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡಿ ಸ್ಥಳಾಂತರ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆಯನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿ ನ್ಯಾಯಕ್ಕೆ ಒತ್ತಾಯಿಸಿದರು.

Related Posts

Leave a Reply

Your email address will not be published. Required fields are marked *