Wednesday, October 14, 2026
Menu

ವರದಕ್ಷಿಣೆ ಪಿಡುಗಿಗೆ ಕುಟುಂಬ ನಾಶ: ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆ!

ಉದಯಕಾಲ ನ್ಯೂಸ್, ಬಳ್ಳಾರಿ: ಗಂಡನ ಕಡೆಯವರಿಂದ ನಿರಂತರವಾಗಿ ಸಿಕ್ಕ ವರದಕ್ಷಿಣೆ ಕಿರುಕುಳ ತಾಳಲಾರದೆ ನೊಂದ ತಾಯಿಯೊಬ್ಬಳು, ತನ್ನ ಕಂದಮ್ಮಗಳಾದ ಇಬ್ಬರು ಮಕ್ಕಳನ್ನು ಒಂದೇ ವೇಲ್‌ನಲ್ಲಿ ಕಟ್ಟಿ ತುಂಗಭದ್ರಾ ಕಾಲುವೆಗೆ ಎಸೆದು, ಬಳಿಕ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಹೃದಯ ವಿದ್ರಾವಕ ಘಟನೆ ಬಳ್ಳಾರಿ ನಗರದ ಅಲ್ಲಿಪುರ ಬಳಿಯ ತುಂಗಭದ್ರಾ ಎಲ್‌ಎಲ್‌ಸಿ (LLC) ಕಾಲುವೆ ಬಳಿ ನಡೆದಿದೆ.

ಈ ದುರ್ಘಟನೆಯಲ್ಲಿ ಬಳ್ಳಾರಿ ನಗರದ ಮಿಲ್ಲರ್ ಪೇಟೆ ನಿವಾಸಿ ಲತೀಪಾ ಸಿಮ್ರಾನ್ (29) ಹಾಗೂ ಅವರ ಮುದ್ದಾದ ಮಕ್ಕಳಾದ ಮಹಮ್ಮದ್ ಅಯಾನ್ (3) ಮತ್ತು ಆಯಿಷಾ ಫಾತಿಮಾ (2) ಮೃತ ದುರ್ದೈವಿಗಳಾಗಿದ್ದಾರೆ.

ದುಘಟನೆಯ ವಿವರ
ಪ್ರಾಥಮಿಕ ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ಲತೀಪಾ ಸಿಮ್ರಾನ್ ಅವರು ತಮ್ಮ ಇಬ್ಬರು ಮಕ್ಕಳನ್ನು ಒಟ್ಟಿಗೆ ಒಂದು ವೇಲ್‌ನಲ್ಲಿ (ಶಾಲು) ಬಿಗಿದು ತುಂಗಭದ್ರಾ ಕಾಲುವೆಗೆ ಎಸೆದಿದ್ದಾರೆ. ಬಳಿಕ ತಾವೂ ಕೂಡ ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಘಟನೆಯ ತೀವ್ರತೆಯಿಂದಾಗಿ ನಾಪತ್ತೆಯಾಗಿದ್ದವರ ಹುಡುಕಾಟಕ್ಕಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಇಂದು ಬೆಳಗ್ಗೆ ಕಾಲುವೆಯಲ್ಲಿ ಲತೀಪಾ ಸಿಮ್ರಾನ್ ಅವರ ಮೃತದೇಹ ಮೊದಲು ಪತ್ತೆಯಾಗಿತ್ತು. ನಂತರ ಆಂಧ್ರಪ್ರದೇಶ ಗಡಿಭಾಗದ ನಾಗಲಾಪುರ ಬಳಿ ನೀರಿನಲ್ಲಿ ತೇಲಾಡುತ್ತಿದ್ದ ಇಬ್ಬರು ಕಂದಮ್ಮಗಳ ಮೃತದೇಹಗಳು ಕೂಡ ಪತ್ತೆಯಾಗಿವೆ. ಮಕ್ಕಳ ಶವಗಳನ್ನು ನೋಡುಗರ ಕರುಳು ಚುರುಕ್ ಎನ್ನುವಂತಿತ್ತು.

ವರದಕ್ಷಿಣೆ ಕಿರುಕುಳದಿಂದ ಕುಟುಂಬ ನಾಶ

ಮೃತ ಲತೀಪಾ ಸಿಮ್ರಾನ್ ಅವರ ಸಾವಿಗೆ ಪತಿ ಮತ್ತು ಆತನ ಕುಟುಂಬದವರೇ ನೇರ ಕಾರಣ ಎಂದು ಮೃತರ ಪೋಷಕರು ಹಾಗೂ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಲತೀಪಾಳ ಪತಿ ಸದ್ದಾಂ ಹುಸೇನ್ ಮದುವೆಯಾದಾಗಿನಿಂದಲೂ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು. ಪ್ರತಿದಿನ ಕುಡಿದು ಬಂದು ಹಲ್ಲೆ ನಡೆಸುವುದು ಮಾತ್ರವಲ್ಲದೆ, ತೀವ್ರವಾದ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

“ಒಂದು ವೇಳೆ ತಾನು ಸತ್ತರೆ, ತನ್ನ ನಂತರ ಈ ಕಂದಮ್ಮಗಳು ಜೀವಂತವಾಗಿದ್ದರೆ ಅವರಿಗೂ ತನ್ನ ಪತಿ ಹಾಗೂ ಅತ್ತೆ-ಮಾವಂದಿರಿಂದ ಭಾರೀ ಹಿಂಸೆ ಹಾಗೂ ಕಿರುಕುಳ ತಪ್ಪುವುದಿಲ್ಲ” ಎಂಬ ಆತಂಕ ಮತ್ತು ಕರಾಳ ಭೀತಿಯಿಂದಲೇ ಲತೀಪಾ ಸಿಮ್ರಾನ್ ಈ ಕಠಿಣ ನಿರ್ಧಾರ ಕೈಗೊಂಡು ಮಕ್ಕಳೊಂದಿಗೆ ಸಾವಿಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ತಂದೆ-ತಾಯಿ ನೀಡಿದ ದೂರಿನ ಮೇರೆಗೆ, ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಸದ್ದಾಂ ಹುಸೇನ್ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
#BallariNews #CrimeNewsKarnataka #DowryHarassment #TungabhadraCanal #TragicIncident #BallariPolice #KarnatakaCrime #JusticeForVictims #UdayakalaNews

Related Posts

Leave a Reply

Your email address will not be published. Required fields are marked *