ನಾಪತ್ತೆಯಾಗಿದ್ದ ಗದಗದ ಕೆಆರ್ಐಡಿಎಲ್ ಎಇಇ ಫರ್ವಿಜ್ ಧಾರವಾಡ ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವುದಾಗಿ ತನಿಖಾಧಿಖಾರಿಗಳು ತಿಳಿಸಿದ್ದಾರೆ.
ಸರ್ಕಾರದಿಂದ ಅನುದಾನ ಬಾರದೆ ಉಪ ಗುತ್ತಿಗೆದಾರರ ಕಿರುಕುಳದಿಂದ ಬೇಸತ್ತ ಎಇಇ ಫರ್ವಿಜ್ ಧಾರವಾಡ ಆತ್ಮಹತ್ಯೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದರು. ಪರ್ವೇಜ್ ಗದಗದಿಂದ ಬೆಂಗಳೂರಿಗೆ, ಬಳಿಕ ಆಂಧ್ರಪ್ರದೇಶದ ವಿಜಯವಾಡ, ಅಲ್ಲಿಂದ ಮಧ್ಯಪ್ರದೇಶದ ಭೋಪಾಲ್ಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅವರು 1,200 ಕಿಲೋಮೀಟರ್ಗೂ ಹೆಚ್ಚು ಪ್ರಯಾಣಿಸಿರುವ ಮಾಹಿತಿ ಸಿಕ್ಕಿದೆ.
ವಿಜಯವಾಡ ತಲುಪಿದ ಬಳಿಕ ಅವರ ಮೊಬೈಲ್ ಲೊಕೇಷನ್ ಪತ್ತೆಯಾಗಿಲ್ಲ. ಮೊಬೈಲ್ ಸ್ವಿಚ್ ಆಪ ಆಗಿದ್ದ ಕಾರಣ ಯಾವುದೇ ಸುಳಿವು ಸಿಕ್ಕಿರಲಿಲ್ಲ. ವಿಜಯವಾಡದಿಂದ ಸಿಸಿಟಿವಿ ಫೂಟೇಜ್ ಬೆನ್ನತ್ತಿದ ಪೊಲೀಸರಿಗೆ ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಪರ್ವೇಜ್ ಕಾಣಿಸಿಕೊಂಡಿದ್ದಾರೆ. ಅಲ್ಲಿಂದ ಮತ್ತೊಂದು ಸ್ಥಳಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿದೆ.
ಗದಗ ಪೊಲೀಸರು ನಿಗಾ ವಹಿಸಿದ್ದು, ಭೋಪಾಲ್ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಫರ್ವೀಜ್, ಕೋಟಿಗಟ್ಟಲೆ ಅನುದಾನ ಬಾರದ ಕಾರಣ ನಿತ್ಯ ಸಬ್ ಗುತ್ತಿಗೆದಾರರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದಾರೆ. ಫೋನ್ ಮೂಲಕವೂ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಪರಿಸ್ಥಿತಿ ನಿಭಾಯಿಸಲು ಆಗದೆ ಜೀವನ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಉಪವಿಭಾಗಕ್ಕೆ ಅನುದಾನ ನೀಡಿ ಸಮಸ್ಯೆ ಬಗೆಹರಿಸಿ, ದಯವಿಟ್ಟು ನನ್ನ ಕುಟುಂಬಕ್ಕೆ ಕಿರುಕುಳ ನೀಡಬೇಡಿ ಎಂದು ಉಲ್ಲೇಖಿಸಿದ್ದಾರೆ.
ಕುಟುಂಬದವರು ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


