ಉದಯಕಾಲ ನ್ಯೂಸ್, ಮುಂಬೈ: ದೇಶದ ಟೆಲಿಕಾಂ ಮತ್ತು ಡಿಜಿಟಲ್ ದಿಗ್ಗಜ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋ ಪ್ಲಾಟ್‌ಫಾರ್ಮ್ಸ್ (Jio Platforms IPO) ತನ್ನ ಬಹುನಿರೀಕ್ಷಿತ ಷೇರು ಮಾರುಕಟ್ಟೆ ಪದಾರ್ಪಣೆಯಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ತಂದುಕೊಟ್ಟಿದೆ. ಅಕ್ಟೋಬರ್ 28ರಂದು ಷೇರು ಮಾರುಕಟ್ಟೆಗೆ ಅದ್ಧೂರಿಯಾಗಿ ಪ್ರವೇಶಿಸಿದ ಜಿಯೋ ಷೇರುಗಳು, ಹೂಡಿಕೆದಾರರ ನಿರೀಕ್ಷೆಯಂತೆ ಬಂಪರ್ ಪ್ರೀಮಿಯಂನೊಂದಿಗೆ ಲಿಸ್ಟ್ ಆಗುವ ಮೂಲಕ ಅಕ್ಷರಶಃ ಇತಿಹಾಸ ಸೃಷ್ಟಿಸಿವೆ.
ಐಪಿಒ ಲಿಸ್ಟಿಂಗ್ ಮತ್ತು ಹೂಡಿಕೆದಾರರ ಲಾಭ
ಜಿಯೋ ಐಪಿಒ ಅಡಿಯಲ್ಲಿ ಪ್ರತಿ ಷೇರಿಗೆ 1,119 ರೂ.ಗಳ ಇಶ್ಯೂ ಬೆಲೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಜಿಯೋ ಷೇರುಗಳು ಶೇ. 21.36ರಷ್ಟು ಭರ್ಜರಿ ಪ್ರೀಮಿಯಂನೊಂದಿಗೆ ಬರೋಬ್ಬರಿ 1,358 ರೂ.ಗಳಿಗೆ ಲಿಸ್ಟ್ ಆದವು. ಇದರಿಂದ ಪ್ರತಿ ಷೇರಿಗೆ ನೇರವಾಗಿ 239 ರೂ.ಗಳ ಲಾಭ ಸಿಕ್ಕಂತಾಗಿದೆ. ನೇರ ಐಪಿಒ ಖರೀದಿ ಪ್ರಕ್ರಿಯೆಯಲ್ಲಿ ಒಂದು ಲಾಟ್‌ನಲ್ಲಿ 12 ಷೇರುಗಳಿದ್ದವು. ಆ ಪ್ರಕಾರ, ಕನಿಷ್ಠ ಹೂಡಿಕೆ ಮಾಡಿ ಐಪಿಒ ಪಡೆದ ಗ್ರಾಹಕರಿಗೆ ಲಿಸ್ಟಿಂಗ್ ಆದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 2,868 ರೂ.ಗಳ ನಿವ್ವಳ ಲಾಭ ದೊರೆತಿದೆ.
ಟಿಸಿಎಸ್ ಮತ್ತು ಏರ್‌ಟೆಲ್ ಹಿಂದಿಕ್ಕಿದ ಜಿಯೋ ಐಪಿಒ
ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಬೆನ್ನಲ್ಲೇ ಜಿಯೋ ಕಂಪನಿಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 12.5 ಲಕ್ಷ ಕೋಟಿ ರೂ.ಗಳ ಗಡಿ ದಾಟಿದೆ. ಈ ಮೂಲಕ ದೇಶದ ದಿಗ್ಗಜ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಹಾಗೂ ಭಾರ್ತಿ ಏರ್‌ಟೆಲ್ (Bharti Airtel) ಕಂಪನಿಗಳನ್ನು ಹಿಂದಕ್ಕೆಳಿದಿರುವ ಜಿಯೋ, ಮಾತೃ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ (RIL) ನಂತರ ಭಾರತದ ಎರಡನೇ ಅತಿ ದೊಡ್ಡ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿ ಹೊಸ ದಾಖಲೆ ಬರೆದಿದೆ.
ಹ್ಯುಂಡೈ ದಾಖಲೆ ಮುರಿದ ಜಿಯೋ ಐಪಿಒ
ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಜಿಯೋ ಐಪಿಒ ಅತ್ಯಂತ ಯಶಸ್ವಿ ಹಾಗೂ ಬೃಹತ್ ಐಪಿಒ ಆಗಿ ದಾಖಲೆ ಬರೆದಿದೆ. ಒಟ್ಟು 30,213 ಕೋಟಿ ರೂ.ಗಳ ಮೊತ್ತದ ಈ ಐಪಿಒ, ಈ ಹಿಂದೆ ಮುಂಚೂನಿಯಲ್ಲಿದ್ದ ‘ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್’ (27,870 ಕೋಟಿ ರೂ.) ದಾಖಲೆಯನ್ನು ಪುಡಿಗಟ್ಟಿದೆ. ಕಳೆದ ವರ್ಷ ಹ್ಯುಂಡೈ ಷೇರುಗಳು ಮಾರುಕಟ್ಟೆಯಲ್ಲಿ ನಷ್ಟದೊಂದಿಗೆ (ಡಿಸ್ಕೌಂಟ್) ಲಿಸ್ಟ್ ಆಗಿ ನಿರಾಶೆ ಮೂಡಿಸಿದ್ದವು. ಆದರೆ ಜಿಯೋ ತನ್ನ ಮೊದಲ ದಿನವೇ ಐತಿಹಾಸಿಕ ಯಶಸ್ಸು ಸಾಧಿಸುವ ಮೂಲಕ ದೇಶದ ಆರ್ಥಿಕ ಹಾಗೂ ತಂತ್ರಜ್ಞಾನ ರಂಗದಲ್ಲಿ ಮತ್ತೊಮ್ಮೆ ತನ್ನ ದೈತ್ಯ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.
#JioIPO #JioPlatforms #StockMarketIndia #RelianceIndustries #TCS #BhartiAirtel #UdayakalaNews #BusinessNews #IPOListing #FinancialNews


