Wednesday, October 28, 2026
Menu

ಬೆಂಗಳೂರು  ಅಭಿವೃದ್ಧಿಗೆ ಆದ್ಯತೆ: ಅನುದಾನದಲ್ಲಿ ತಾರತಮ್ಯವಿಲ್ಲ – ಸಿಎಂ ಡಿಕೆ ಶಿವಕುಮಾರ್

 

ಉದಯಕಾಲ ನ್ಯೂಸ್, ಬೆಂಗಳೂರು: ದೇಶದ ಪ್ರಮುಖ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಜನಸಂಖ್ಯೆ ಮತ್ತು ವಾಹನಗಳ ದಟ್ಟಣೆ ತೀವ್ರವಾಗಿ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ರಸ್ತೆಗಳ ಸಾಮರ್ಥ್ಯ ಕಡಿಮೆಯಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ನಗರದ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ಸುಗಮಗೊಳಿಸಲು ರಾಜ್ಯ ಸರ್ಕಾರವು ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸಿಎಂ ನಿವಾಸದಲ್ಲಿ ಮಹತ್ವದ ಸಭೆ

ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ತಮ್ಮ ಅಧಿಕೃತ ನಿವಾಸ ‘ಕೃಷ್ಣಾ’ದಲ್ಲಿ ಹಮ್ಮಿಕೊಂಡಿದ್ದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಯಾವುದೇ ರೀತಿಯ ಅನುದಾನದ ತಾರತಮ್ಯವಿಲ್ಲದೆ ಎಲ್ಲಾ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ಒದಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದರೆ ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಮುಖ ಮೂಲಸೌಕರ್ಯ ಯೋಜನೆಗಳು

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು 40 ಕಿ.ಮೀ ಉದ್ದದ ದ್ವಿಪಥ ಸುರಂಗ ಮಾರ್ಗ, 120 ಕಿ.ಮೀ ಉದ್ದದ ಎತ್ತರಿಸಿದ ಕಾರಿಡಾರ್ (Elevated Corridor) ಹಾಗೂ 1,500 ಕಿ.ಮೀ ಆರ್ಟಿಲರಿ ಮತ್ತು ಸಬ್ ಆರ್ಟಿಲರಿ ರಸ್ತೆಗಳ ಉನ್ನತೀಕರಣ ಕಾರ್ಯವನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗಿದೆ.

ಮೆಟ್ರೋ ಮತ್ತು ಸಾರಿಗೆ ವಿಸ್ತರಣೆ

ಪ್ರಸ್ತುತ 96 ಕಿ.ಮೀ ಇರುವ ಮೆಟ್ರೋ ಮಾರ್ಗವನ್ನು 2027ರ ವೇಳೆಗೆ 170 ಕಿ.ಮೀಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬಿಎಂಟಿಸಿ ಬಸ್ ಸೌಲಭ್ಯವನ್ನು ಬಲಪಡಿಸಲು ಹೊಸದಾಗಿ 4,500 ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಸಬ್ ಅರ್ಬನ್ ರೈಲು ಯೋಜನೆಯನ್ನು 2030ರೊಳಗೆ 150 ಕಿ.ಮೀ ವ್ಯಾಪ್ತಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ.

ಕಾವೇರಿ 6ನೇ ಹಂತ ಮತ್ತು ಕಸ ನಿರ್ವಹಣೆ

ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರು ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರು ನಗರವು 2027ಕ್ಕೆ 500 ವರ್ಷಗಳನ್ನು ಪೂರೈಸಲಿರುವ ಹಿನ್ನೆಲೆಯಲ್ಲಿ, ಮುಂದಿನ 10 ವರ್ಷಗಳ ದೂರದೃಷ್ಟಿಯನ್ನುಟ್ಟುಕೊಂಡು ಅಂದಾಜು 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಲಾಗಿದೆ ಎಂದು ಸಿಎಂ ತಿಳಿಸಿದರು.

#BengaluruInfrastructure #CMDKShivakumar #TunnelRoad #NammaMetro #BangaloreDevelopment #UdayakalaNews #KarnatakaPolitics #TrafficManagement #SmartCityBengaluru

Related Posts

Leave a Reply

Your email address will not be published. Required fields are marked *