ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಪ್ರದೋಷ್ ಮಾಫಿ ಸಾಕ್ಷಿ ಆಗಿರುವುದನ್ನು ಪ್ರಶ್ನಿಸಿ ಪ್ರಮುಖ ಆರೋಪಿಯಾಗಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
ಮಾಫಿ ಸಾಕ್ಷಿ ವಿಚಾರದಲ್ಲಿ ಸಹ ಆರೋಪಿಗಳಿಗೆ ನೇರವಾಗಿ ಅದನ್ನು ಪ್ರಶ್ನಿಸುವ ಯಾವುದೇ ಕಾನೂನುಬದ್ಧ ಹಕ್ಕು ಇರುವುದಿಲ್ಲ, ಆರೋಪಿ ಮತ್ತು ಕೋರ್ಟ್ ಮಧ್ಯೆ ನಡೆಯುವ ಪ್ರಕ್ರಿಯೆ ಇದಾಗಿದೆ. ಪ್ರಾಸಿಕ್ಯೂಷನ್ ಮಾತ್ರ ಈ ಪ್ರಕ್ರಿಯೆಯ ಮಾಲೀಕ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.
ಮಾಫಿ ಸಾಕ್ಷಿಯಾಗಿರುವ ಪ್ರದೋಷ್ನನ್ನು ವಿಚಾರಣೆ ವೇಳೆ ಪಾಟೀ ಸವಾಲು ನಡೆಸಲು ನಿಮಗೆ ಹಕ್ಕಿದೆ. ನಿಮ್ಮ ಕಕ್ಷಿದಾರರು (ದರ್ಶನ್) ಹಾಜರಿರಲು ಅನುಮತಿ ನೀಡಲಾಗಿದೆ. ನೀವು ಯಾವ ರೀತಿಯ ಪ್ರಶ್ನೆಗಳನ್ನು ಬೇಕಾದರೂ ಕೇಳಬಹುದು. ಅದನ್ನು ವಿಚಾರಣಾ ನ್ಯಾಯಾಲಯದ ಎದುರು ಮಂಡಿಸಿ ಎಂದು ದರ್ಶನ್ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.
ಪ್ರದೋಷ್ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿ ಬೇರೆಯವರೊಂದಿಗೆ ಸಂಪರ್ಕ ಸಾಧಿಸಿ ಒತ್ತಡಕ್ಕೆ ಒಳಗಾಗಿ ಮಾಫಿ ಸಾಕ್ಷಿಯಾಗಿದ್ದಾರೆ, ಈ ಬಗ್ಗೆ ತನಿಖೆ ಮುಗಿಯುವವರೆಗೆ ಹೇಳಿಕೆ ದಾಖಲಿಸಬಾರದು ಎಂಬ ದರ್ಶನ್ ಪರ ವಕೀಲರ ವಾದವನ್ನು ಕೋರ್ಟ್ ಒಪ್ಪಲಿಲ್ಲ.
ಎಸ್ಪಿಪಿ ಪ್ರಸನ್ನ ಕುಮಾರ್, ಪ್ರದೋಷ್ ಅಕ್ರಮ ಮೊಬೈಲ್ ಬಳಕೆ ಮಾಡಿಲ್ಲ, ಅಧಿಕೃತ ಲ್ಯಾಂಡ್ಲೈನ್ ಮೂಲಕ ಪತ್ನಿ ಜೊತೆ ಮಾತ್ರ ಮಾತನಾಡಿದ್ದಾರೆ, ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅರ್ಜಿ ಸಲ್ಲಿಸಿ ವಿಚಾರಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ವಾದಿಸಿದರು.
ಪ್ರದೋಷ್ ಪರ ವಕೀಲ ದಿವಾಕರ್, ದರ್ಶನ್ ಕಡೆಯವರು ಪದೇ ಪದೆ ಅರ್ಜಿಗಳನ್ನು ಸಲ್ಲಿಸಿ ವಿಚಾರಣೆಯನ್ನು ವಿಳಂಬ ಮಾಡುತ್ತಿದ್ದಾರೆ. ಪ್ರದೋಷ್ ತನ್ನ ಹೆಂಡತಿಯೊಂದಿಗೆ ಮಾತನಾಡಿದ್ದು, ಬೇರೆ ಯಾವುದೇ ತಪ್ಪು ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠ, ಪ್ರದೋಷ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ ಸೆಷನ್ಸ್ ಕೋರ್ಟ್ ಆದೇಶವು ಕಾನೂನುಬಾಹಿರ ಎನ್ನಲು ಯಾವುದೇ ಆಧಾರಗಳಿಲ್ಲ ಎಂದು ತೀರ್ಮಾನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.


