ಉದಯಕಾಲ ನ್ಯೂಸ್, ಚಿಕ್ಕೋಡಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅನ್ನದಾತರ ಸಂಕಷ್ಟಗಳಿಗೆ ಧ್ವನಿಯಾಗಿರುವ ಜೈನ ಮುನಿಗಳು ಕಬ್ಬಿಗೆ ಕನಿಷ್ಠ ₹5,000 ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಅಖಾಡಕ್ಕಿಳಿದಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬಹನಟ್ಟಿ ತಾಲೂಕಿನ ಹಳಿಂಗಳಿ ಭದ್ರಗಿರಿಯಲ್ಲಿ ಪ.ಪೂ. ಆಚಾರ್ಯರತ್ನ ಶ್ರೀ 108 ಮುನಿಕುಲರತ್ನ ಭೂಷಣ ಮಹಾರಾಜರು ಕಳೆದ ಆರು ದಿನಗಳಿಂದ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ರಾಜ್ಯಾದ್ಯಂತ ತೀವ್ರ ಗಮನ ಸೆಳೆದಿದೆ.
ಉಚಿತ ಭಾಗ್ಯಗಳ ಬದಲು ರೈತರಿಗೆ ಬೆಂಬಲ ಬೆಲೆ ನೀಡಿ
ಸರ್ಕಾರದ ಉಚಿತ ಯೋಜನೆಗಳ ನೀತಿಯನ್ನು ಕಟುವಾಗಿ ಟೀಕಿಸಿರುವ ಶ್ರೀಗಳು, “ಸರ್ಕಾರ ‘ಈ ಭಾಗ್ಯ’, ‘ಆ ಭಾಗ್ಯ’ ಎಂದು ಎಲ್ಲವನ್ನೂ ಉಚಿತವಾಗಿ ನೀಡುತ್ತಿದೆ. ಆದರೆ ಹಗಲಿರುಳು, ಚಳಿ-ಮಳೆ ಎನ್ನದೆ ಮಣ್ಣಿನಲ್ಲಿ ಬೆವರು ಸುರಿಸಿ ದುಡಿಯುವ ರೈತನ ಕಷ್ಟಕ್ಕೆ ಮಾತ್ರ ಸೂಕ್ತ ಪರಿಹಾರ ಸಿಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಉಚಿತ ಸೌಲಭ್ಯಗಳಿಂದ ಜನರು ಆಲಸಿಗಳಾಗುತ್ತಿದ್ದಾರೆ ಎಂದ ಅವರು, ರೈತರಿಗೆ ಉಚಿತ ಯೋಜನೆಗಳ ಬದಲಾಗಿ ಬೆಳೆಗೆ ತಕ್ಕ ಬೆಂಬಲ ಬೆಲೆ, ಉಚಿತ ವಿದ್ಯುತ್ ಹಾಗೂ ಸಮರ್ಪಕ ನೀರಾವರಿ ಸೌಲಭ್ಯಗಳನ್ನು ಒದಗಿಸಿದರೆ ರೈತರು ಸ್ವಾವಲಂಬಿಗಳಾಗುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
ಟನ್ ಕಬ್ಬಿಗೆ ₹5,000 ಬೆಂಬಲ ಬೆಲೆಗೆ ಆಗ್ರಹ
ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕೆ.ಜಿಗೆ ₹50ರಿಂದ ₹60 ಇದ್ದರೂ, ಕಬ್ಬು ಬೆಳೆಯುವ ರೈತರಿಗೆ ಮಾತ್ರ ತಕ್ಕ ಬೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮುನಿಗಳು, ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರವು ಕನಿಷ್ಠ ₹500 ಸಹಾಯಧನ ನೀಡಬೇಕು. ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹4,500 ಹಾಗೂ ಸರ್ಕಾರ ₹500 ಸೇರಿಸಿ ಒಟ್ಟಾರೆಯಾಗಿ ರೈತನಿಗೆ ಕನಿಷ್ಠ ₹5,000 ಬೆಂಬಲ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ರೈತರನ್ನು ಶೋಷಿಸುತ್ತಿರುವ ಕಾರ್ಖಾನೆ ಮಾಲೀಕರ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀಗಳು, ಒಂದು ಟನ್ ಕಬ್ಬಿನಿಂದ ಕಾರ್ಖಾನೆಗಳಿಗೆ ಬೃಹತ್ ಲಾಭ ಸಿಗುತ್ತದೆ. ಕಾರ್ಖಾನೆಗಳು ಮುಚ್ಚಿಹೋಗಬೇಕು ಎಂಬುದು ನಮ್ಮ ಉದ್ದೇಶವಲ್ಲ, ಅವರಿಗೂ ಲಾಭ ಬೇಕು, ಆದರೆ ಸಂಪೂರ್ಣ ಲಾಭವನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ ಸ್ವಲ್ಪ ಪಾಲನ್ನು ರೈತರಿಗೂ ನೀಡಬೇಕು ಎಂದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ರೈತರ ಮನೆಗೆ ಬಂದು ಕಾಲು ಹಿಡಿಯುವ ರಾಜಕಾರಣಿಗಳು, ಇಂದು ರೈತರು ಸಂಕಷ್ಟದಲ್ಲಿದ್ದರೂ ಕಣ್ತೆರೆದು ನೋಡುತ್ತಿಲ್ಲ ಎಂದು ಟೀಕಿಸಿದರು. ರೈತರ ಹೋರಾಟ ಯಶಸ್ವಿಯಾಗುವವರೆಗೆ ಉಪವಾಸ ಮುಂದುವರಿಸುವುದಾಗಿ ತಿಳಿಸಿರುವ ಅವರು, ಭದ್ರಗಿರಿಯಲ್ಲಿ 24 ಗಂಟೆಗಳ ಕಾಲ ‘ಅಖಂಡ ನಮೋಕಾರ ಮಹಾಮಂತ್ರ ಅನುಷ್ಠಾನ’ ಆರಂಭಿಸಿದ್ದಾರೆ. ಭಗವಾನ್ ಮಹಾವೀರರ ‘ಜೀವ್ ಔರ್ ಜೀನೇ ದೋ’ (ಬದುಕು ಮತ್ತು ಬದುಕಲು ಬಿಡು) ತತ್ವದಂತೆ ಕಾರ್ಖಾನೆ ಮಾಲೀಕರು ರೈತರನ್ನು ಬದುಕಲು ಬಿಡಬೇಕು ಎಂದು ಕರೆ ನೀಡಿದ್ದಾರೆ.
#SugarcaneFarmers #JainSaints #ChikkodiNews #SupportPrice #KarnatakaPolitics #UdayakalaNews #FarmersProtest #Bhadragiri #AgricultureNews

