Wednesday, October 28, 2026
Menu

ಸಹಕಾರ ಕ್ಷೇತ್ರದಲ್ಲಿ ನೂತನ ಹೆಜ್ಜೆ: ಹೊಸ ಕೋರ್ಸ್ ‘ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್’ಆರಂಭ!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಕೌಶಲ್ಯಯುತ ಹಾಗೂ ವೃತ್ತಿಪರ ಮಾನವ ಸಂಪನ್ಮೂಲವನ್ನು ಒದಗಿಸುವ ಮತ್ತು ಲೆಕ್ಕಪರಿಶೋಧನೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ, ರಾಜ್ಯ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಆರು ತಿಂಗಳ ಅವಧಿಯ ನೂತನ ‘ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್’ (DCA) ಕೋರ್ಸ್ ಅನ್ನು ಆರಂಭಿಸುವುದಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಘೋಷಿಸಿದೆ.

ಈ ನೂತನ ಕೋರ್ಸ್ ಮೂಲಕ ರಾಜ್ಯದ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸಹಕಾರ ಸಂಘಗಳ ಆಡಳಿತ ಮತ್ತು ಹಣಕಾಸು ನಿರ್ವಹಣೆ ಮತ್ತಷ್ಟು ಬಲಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಕೋರ್ಸ್‌ನ ವಿಶೇಷತೆಗಳು ಮತ್ತು ಪಠ್ಯಕ್ರಮ

ಆರು ತಿಂಗಳ ಸುದೀರ್ಘ ಅವಧಿಯ ಈ ಕೋರ್ಸ್‌ನಲ್ಲಿ ಕೇವಲ ಸಿದ್ಧಾಂತಕ್ಕೆ ಸೀಮಿತವಾಗದೆ, ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಸಹಕಾರ ಕಾಯ್ದೆ ಮತ್ತು ನಿಯಮಗಳು, ಅಕೌಂಟಿಂಗ್ ಆ್ಯಂಡ್ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್, ಕೋ-ಆಪರೇಟಿವ್ ಆಡಿಟಿಂಗ್, ಕೋ-ಆಪರೇಟಿವ್ ಇಕೋ-ಸಿಸ್ಟಂ ಹಾಗೂ ಟ್ಯಾಲಿ ಸೇರಿದಂತೆ ಇತ್ತೀಚಿನ ಆಧುನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕುರಿತು ಸಮಗ್ರ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ತರಗತಿ ಬೋಧನೆ, ಕೇಸ್ ಸ್ಟಡೀಸ್, ಫೀಲ್ಡ್ ಸ್ಟಡೀಸ್ ಮತ್ತು ಪ್ರಾಯೋಗಿಕ ಲೆಕ್ಕಪರಿಶೋಧನಾ ಕೆಲಸದ ಅನುಭವವನ್ನು ಈ ಕೋರ್ಸ್ ಒಳಗೊಂಡಿರಲಿದೆ.

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಕಾಂ, ಬಿಬಿಎಂ ಅಥವಾ ಅಕೌಂಟೆನ್ಸಿಯನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ ಪ್ರವೇಶ ಶುಲ್ಕ 10 ಸಾವಿರ ರೂಪಾಯಿಗಳಾಗಿದ್ದು, ಬಿಪಿಎಲ್, ಎಸ್‌ಸಿ ಹಾಗೂ ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.

ವಾರ್ಷಿಕ 500 ಲೆಕ್ಕಪರಿಶೋಧಕರ ಹೊರತರುವ ಗುರಿ

ಸಹಕಾರ ಸಂಘಗಳ ವ್ಯವಹಾರಿಕ ಲೋಪದೋಷಗಳನ್ನು ತಡೆಗಟ್ಟಿ, ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಈ ತರಬೇತಿ ಸಹಕಾರಿಯಾಗಿದೆ. ವಾರ್ಷಿಕವಾಗಿ 500 ಜನ ಸಮರ್ಥ ಲೆಕ್ಕಪರಿಶೋಧಕರನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ರಾಜ್ಯದ ಬೆಂಗಳೂರು, ಧಾರವಾಡ, ಮೈಸೂರು, ಮಡಿಕೇರಿ, ಕಲಬುರಗಿ, ಮಂಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಸೇರಿದಂತೆ ಎಂಟು ಪ್ರಮುಖ ಸಹಕಾರ ತರಬೇತಿ ಕೇಂದ್ರಗಳಲ್ಲಿ ಈ ತರಬೇತಿ ಲಭ್ಯವಿರಲಿದೆ.

ಅಕ್ಟೋಬರ್ 30ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಆಸಕ್ತರು [https://dca.kscfl.in](https://dca.kscfl.in) ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

#CooperativeSector #KarnatakaNews #CooperativeAudit #DiplomaCourses #UdayakalaNews #JobOpportunities

Related Posts

Leave a Reply

Your email address will not be published. Required fields are marked *