ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಳೆದ ಸರ್ಕಾರಕ್ಕಿಂತಲೂ ಕಮಿಷನ್ ಜಾಸ್ತಿ ಇದೆ, ಅದು ಎಷ್ಟು ಪಟ್ಟು ಎಂಬುದಾಗಿ ಕೇಳಬೇಡಿ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಗುತ್ತಿಗೆದಾರರ ಸಂಘವು ಸರ್ಕಾರಕ್ಕೆ ಪತ್ರ ಬರೆದು ಬಾಕಿ ಹಣ ಬಿಡುಗೆಗೆ ಈಗಾಗಲೇ ಒತ್ತಾಯಿಸಿದೆ. ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆಗೊಳಿಸದಿದ್ದರೆ ಕಮಿಷನ್ ದಂಧೆಯ ದಾಖಲೆ ಬಿಡುಗಡೆ ಮಾಡುವುದಾಗಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಶಾಸಕರು ಕೂಡ ಗುತ್ತಿಗೆ ವಿಚಾರದಲ್ಲಿ ಮಧ್ಯೆ ಪ್ರವೇಶಿಸುತ್ತಿದ್ದಾರೆ, ನಿಜವಾದ ಗುತ್ತಿಗೆದಾರರು ಮಾಯವಾಗುತ್ತಿರುವುದರಿಂದ ಒಂದು ಕಡೆ ಕೆಲಸವೂ ಇಲ್ಲ, ಮತ್ತೊಂದೆಡೆ ಹಣವೂ ಇಲ್ಲ ಎಂಬಂತಾಗಿದೆ. ಟೆಂಡರ್ ಆದರೆ ಮೊದಲು ಶಾಸಕರ ಬಳಿ ಮೊದಲು ಹೋಗಬೇಕು. ಅವರು ಓಕೆ ಅಂದಮೇಲೆ ಕಾಮಗಾರಿ ಶುರು ಆಗುತ್ತದೆ, ಈ ವಿಚಾರ ಸಿಎಂಗೂ ಗೊತ್ತಿದೆ. ನಮ್ಮ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗುತ್ತಿದ್ದು, ಮೊದಲು ನಾವು ಕೆಲಸ ಮಾಡಿರುವ ಹಣ ಕೊಡಿ ಎಂದು ಗುತ್ತಿಗೆದಾರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ನಾಲ್ಕು ವರ್ಷದಿಂದ ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಕೆಂಪಣ್ಣರನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು, ಆದರೆ ಸಿದ್ದರಾಮಯ್ಯ 3 ವರ್ಷ ಸಿಎಂ ಆಗಿ ನಮಗೆ ಯಾವುದೇ ನೆರವು ನೀಡಿಲ್ಲ. ಡಿಸಿಎಂ ಆಗಿದ್ದ ಡಿಕೆ ಶಿವಕುಮಾರ್ ಪ್ರತಿಭಟನಾ ಜಾಗಕ್ಕೆ ಬಂದು ಭರವಸೆ ನೀಡಿದರು. ಬಳಿಕ ಶಿವಕುಮಾರ್ ಅಧಿಕಾರಕ್ಕೆ ಬಂರು, ಅವರನ್ನು ಗುತ್ತಿಗೆದಾರರು ಭೇಟಿಯಾದಾಗ ಜೂನ್ 30ಕ್ಕೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದರೂ ಎಂಟು ಇಲಾಖೆಯಲ್ಲಿ 38 ಸಾವಿರ ಕೋಟಿ ಹಣ ಬಾಕಿ ಇದೆ ಎಂದು ಮಂಜುನಾಥ್ ತಿಳಿಸಿದ್ದಾರೆ.


