Wednesday, October 28, 2026
Menu

ಹಾಸನಾಂಬ ಗರ್ಭಗುಡಿ ತೆರೆಯಲು ಸಕಲ ಸಿದ್ಧತೆ: ಒಂದು ಗೋಲ್ಡ್ ಪಾಸ್‌ ಒಬ್ಬರಿಗೆ ದರ್ಶನ – ಸಚಿವ ಶಿವಲಿಂಗೇಗೌಡ

ಉದಯಕಾಲ ನ್ಯೂಸ್, ಹಾಸನ: ನಾಡದೇವತೆ ಪ್ರಸಿದ್ಧ ಹಾಸನಾಂಬಾ ದೇವಿ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗುರುವಾರ ಗರ್ಭಗುಡಿಯ ಪವಿತ್ರ ಬಾಗಿಲು ತೆರೆಯಲಿದೆ. ಭಕ್ತರಿಗೆ ಯಾವುದೇ ರೀತಿಯ ಅಡಚಣೆಯಿಲ್ಲದೆ ಸುಗಮ ದರ್ಶನ ಕಲ್ಪಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.

ಕಟ್ಟುನಿಟ್ಟಿನ ದರ್ಶನ ಸಮಯ ಹಾಗೂ ಗೋಲ್ಡ್ ಪಾಸ್

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಬಾರಿ ಜಾತ್ರಾ ಮಹೋತ್ಸವದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ದರ್ಶನಕ್ಕಾಗಿ ಪ್ರವೇಶ ಪಡೆಯುವ ‘ಗೋಲ್ಡ್ ಪಾಸ್’ (Gold Pass) ಕುರಿತು ಸ್ಪಷ್ಟನೆ ನೀಡಿದ ಅವರು, ಒಂದು ಗೋಲ್ಡ್ ಪಾಸ್‌ನಲ್ಲಿ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ದರ್ಶನ ಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದರು. ಅಲ್ಲದೆ, ಗೋಲ್ಡನ್ ಪಾಸ್‌ ಹೊಂದಿರುವವರಿಗೆ ಬೆಳಿಗ್ಗೆ 8:00 ಗಂಟೆಯಿಂದ ಬೆಳಿಗ್ಗೆ 10:00 ಗಂಟೆಯವರೆಗೆ ಪ್ರತ್ಯೇಕ ದರ್ಶನ ಸಮಯವನ್ನು ನಿಗದಿಪಡಿಸಲಾಗಿದೆ. ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ಪ್ರೋಟೋಕಾಲ್ ಗಣ್ಯರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಶೇಷ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳ ಆಯೋಜನೆ

ಮೈಸೂರು ದಸರಾ ಮಾದರಿಯಲ್ಲಿಯೇ ಹಾಸನಾಂಬ ಜಾತ್ರಾ ಮಹೋತ್ಸವವನ್ನು ನಾಡಹಬ್ಬದ ರೀತಿಯಲ್ಲಿ ವೈಭವೋಪೇತವಾಗಿ ಆಚರಿಸಲಾಗುತ್ತಿದೆ. ನಗರದ ವಸ್ತು ಪ್ರದರ್ಶನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಮತ್ತು ಪುರುಷರಿಗಾಗಿ 400ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಲಿರುವ ಬೃಹತ್ ಕುಸ್ತಿ ಪಂದ್ಯಾವಳಿ, ಕಬಡ್ಡಿ, ವಾಲಿಬಾಲ್ ಪಂದ್ಯಗಳು ಹಾಗೂ ಹಳ್ಳಿಕಾರ್, ಅಮೃತ್ ಮಹಲ್ ತಳಿಗಳ ರಾಸುಗಳ ಪ್ರದರ್ಶನ ಆಯೋಜಿಸಲಾಗಿದೆ. ಇದರೊಂದಿಗೆ ರಂಗೋಲಿ ಸ್ಪರ್ಧೆ, ಶ್ವಾನ ಪ್ರದರ್ಶನ ಮತ್ತು ಕೋಲಾಟ ಕಾರ್ಯಕ್ರಮಗಳು ಜನರ ಮನ ಸೆಳೆಯಲಿವೆ ಎಂದು ಸಚಿವರು ವಿವರಿಸಿದರು.

ಮುಖ್ಯಮಂತ್ರಿ ಡಿಕೆಶಿ ಹಾಗೂ ಗಣ್ಯರ ಭೇಟಿ; ರಾಜಕೀಯ ರಹಿತ ಆಚರಣೆಗೆ ಮನವಿ

ನವೆಂಬರ್ 1 ರಿಂದ 6ರೊಳಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸಲಿದ್ದು, ನವೆಂಬರ್ 6ರಂದು ಮಾಜಿ ಸಿಎಂ ಸಿದ್ದರಾಮಯ್ಯ ದೇವಿಯ ದರ್ಶನ ಪಡೆಯಲಿದ್ದಾರೆ. ಪ್ರಧಾನ ಅರ್ಚಕರೊಂದಿಗೆ ಚರ್ಚಿಸಿ, ಗರ್ಭಗುಡಿಯ ಬಾಗಿಲನ್ನು ಪದೇ ಪದೇ ಮುಚ್ಚದಂತೆ ಹಾಗೂ ಹೆಚ್ಚು ಅರ್ಚಕರನ್ನು ನೇಮಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಇದರಿಂದ ಭಕ್ತರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ ಎಂದರು.

ಹಾಸನಾಂಬ ದೇವಿ ಇಡೀ ರಾಜ್ಯದ ಜನತೆಗೆ ಸೇರಿದವಳು. ಸ್ಥಳೀಯರು ಎಂಬ ಸಂಕುಚಿತ ಮನೋಭಾವ ಬೇಡ. ಪಕ್ಷ, ಭೇದ-ಭಾವ ಮರೆತು ಎಲ್ಲರೂ ನಾಡಹಬ್ಬವನ್ನು ಯಶಸ್ವಿಗೊಳಿಸೋಣ. ಜಾತ್ರಾ ಮಹೋತ್ಸವ ಮುಗಿದ ಮೇಲೆ ಬೇಕಾದರೆ ರಾಜಕಾರಣ ಮಾಡೋಣ ಎಂದು ಸಚಿವರು ಮನವಿ ಮಾಡಿದರು. ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಆಹ್ವಾನದ ಕುರಿತ ಗೈರುಹಾಜರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ತಾವೇ ಖುದ್ದಾಗಿ ಹಲವು ಬಾರಿ ಕರೆ ಮಾಡಿ ಆಹ್ವಾನಿಸಿದ್ದಾಗಿ ಸ್ಪಷ್ಟಪಡಿಸಿದರು.

#HasanambaTemple #HassanNews #KMShivalingeGowda #GoldPass #NammaHassan #UdayakalaNews #KarnatakaFestivals #HasanambaJatra

Related Posts

Leave a Reply

Your email address will not be published. Required fields are marked *