ಕೆಪಿಎಸ್‌ಸಿ ಅಕ್ರಮಗಳು ಇಂದು, ನಿನ್ನೆಯದಲ್ಲ. ಇದಕ್ಕೆ ಕರಾಳ ಇತಿಹಾಸವಿದೆ. ಪ್ರಾಮಾಣಿಕ- ಪ್ರತಿಭಾವಂತ ಪದವೀಧರ್‍ಯಾರಿಗೂ ಕೆಪಿಎಸ್‌ಸಿ ಮೇಲೆ ಲವಲೇಶವೂ ನಂಬಿಕೆಯಿಲ್ಲ. ಅವರೆಷ್ಟೇ ಜಾಣರಾಗಿ ಆಯೋಗದ ಪರೀಕ್ಷೆ ಬರೆದರೂ, ಅವರ್‍ಯಾರೂ ಪಾಸಾಗುವುದಿಲ್ಲ ಮತ್ತು ಇಂತಹ ಪ್ರತಿಭೆಗಳಿಗೆ ಲಂಚವಿಲ್ಲದೆ ಸರ್ಕಾರಿ ನೌಕರಿಯೂ ಸಿಗುವುದಿಲ್ಲ.
ರಾಜ್ಯದ ಪದವೀಧರ ಯುವಕ- ಯುವತಿಯರ ಭವಿಷ್ಯ ಮತ್ತು ಬದುಕಿಗೆ ಆಸರೆ ಹಾಗೂ ಆಶಾಕಿರಣ ಆಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗವು ಇವರೆಲ್ಲರ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿದೆ. ಇದಕ್ಕೆ ಅಂಟಿರುವ ಘನ ಘೋರ ವ್ಯಾಧಿಯನ್ನು ಗುಣಪಡಿಸಲು ಸರ್ಕಾರಗಳಿಂದ ಸಾಧ್ಯವಾಗಿಲ್ಲ ! ಅಸಲಿಗೆ ಸಂಪೂರ್ಣ ರೋಗಗ್ರಸ್ಥವಾಗಿರುವ ಈ ಆಯೋಗವನ್ನು ಜನಪರ ಸಂಸ್ಥೆಯಾಗಿ ಮಾರ್ಪಡಿಸಲು ಸಂಬಂಧಪಟ್ಟವರ ಕೈಯಲ್ಲಿ ಆಗಿಲ್ಲ. ಇದೊಂದು ಕಳವಳಕಾರಿ ಸಂಗತಿ.
ಕೆಪಿಎಸ್‌ಸಿ ಅಕ್ರಮಗಳು ಇಂದು, ನಿನ್ನೆಯದಲ್ಲ. ಇದಕ್ಕೆ ಸುದೀರ್ಘ ಕರಾಳ ಇತಿಹಾಸವಿದೆ. ಇಂದಿನ ಪ್ರಾಮಾಣಿಕ- ಪ್ರತಿಭಾವಂತ ಪದವೀಧರರು ಕೆಪಿಎಸ್ ಸಿ ಮೇಲೆ ಲವಲೇಶವೂ ನಂಬಿಕೆಯನ್ನಿಟ್ಟಿಲ್ಲ. ಏಕೆಂದರೆ ಅವರು ಎಷ್ಟೇ ಜಾಣರಾಗಿ ಆಯೋಗವು ನಿರ್ವಹಿಸುವ ಪರೀಕ್ಷೆ ಬರೆದರೂ, ಅವರ್‍ಯಾರೂ ಇದರಲ್ಲಿ ಪಾಸಾಗುವುದಿಲ್ಲ ಮತ್ತು ಅಂತಹ ಪ್ರತಿಭೆಗಳಿಗೆ ಲಂಚವಿಲ್ಲದೆ ಸರ್ಕಾರಿ ನೌಕರಿಯೂ ಸಿಗುವುದಿಲ್ಲ ! ರಾಜ್ಯದ ಇಂದಿನ ಲಕ್ಷಾಂತರ ಮಂದಿ ಯುವಕ ಯುವತಿಯರು ಈ ಕಾರಣದಿಂದಲೇ, ತಮ್ಮ ವಿದ್ಯಾಶಕ್ತಿ ಮತ್ತು ಮೆರಿಟ್ ಅನ್ನು ನಂಬಿ ಸರ್ಕಾರಿ ನೌಕರಿಯನ್ನು ಪಡೆಯುವ ಆಸೆಗೆ ಎಳ್ಳು ನೀರು ಬಿಟ್ಟಿದ್ದಾರೆ.
ರಾಜ್ಯದ ಯುವಜನತೆಗೆ ಬೇಕಿರುವುದು ಅಧೋಗತಿಗಿಳಿದ ಕೆಪಿಎಸ್‌ಸಿ ಮೇಜರ್ ಸರ್ಜರಿ. ವಿಧಾನ ಮಂಡಲದ ಅಧಿವೇಶನದಲ್ಲಿ ಗಂಭೀರ ಮತ್ತು ಅರ್ಥಪೂರ್ಣ ಚರ್ಚೆ ಆಗಬೇಕಿರುವುದು ಇಂತಹ ಆಯೋಗಕ್ಕೆ ಹಿಡಿದ ಗ್ರಹಣವನ್ನು ಬಿಡಿಸುವುದು ಮತ್ತು ತಗಲಿದ ರೋಗವನ್ನು ಗುಣಪಡಿಸಲು ಬೇಕಿರುವ ಔಷಧಿ ಮತ್ತು ಚಿಕಿತ್ಸೆ ಬಗ್ಗೆ ಆಲೋಚಿಸುವುದು. ದುರದೃಷ್ಟವಶಾತ್ ಈ ವಿಷಯ ಕುರಿತು ಶಾಸನಸಭೆಗಳಲ್ಲಿ ಚರ್ಚೆಗಳಾಗುತ್ತಿಲ್ಲ. ಇಂತಹ ವಿಷಯಗಳ ಚರ್ಚೆಯನ್ನು ಆಡಳಿತ ಪಕ್ಷದ ಸದಸ್ಯರು ಪ್ರಸ್ತಾಪಿಸಬಾರದೆಂಬ ನಿಯಮವೇನೂ ಇಲ್ಲ. ಒಟ್ಟಿನಲ್ಲಿ ನಿತ್ಯವೂ ಮಹಾಪೀಡೆಯಾಗಿ ಯುವಜನತೆಯನ್ನು ಕಾಡಿದ ಕೆಪಿಎಸ್‌ಸಿ ಸುದೀರ್ಘ ವ್ಯಾಧಿಯ ನಿರ್ಮೂಲನೆ ಹೇಗೆಂಬುದರ ಪ್ರಾಥಮಿಕ ಆಲೋಚನೆಯೇ ಜನಪ್ರತಿನಿಧಿಗಳ ಮನಸಿಗೆ ತಟ್ಟದಿರುವುದು ಕಳವಳಕಾರಿ.
ಆಯೋಗದ ಅಧ್ಯಕ್ಷರು ಮನಸು ಮಾಡಿದರೆ ಅಂಟಿರುವ ಈ ವ್ಯಾಧಿ ಮತ್ತು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಲು ಖಂಡಿತವಾಗಿಯೂ ಸಾಧ್ಯ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ? ಆಯೋಗದ ಅಧ್ಯಕ್ಷರ ನಿವಾಸದಲ್ಲಿಯೇ ಕೊಟ್ಯಂತರ ರೂಪಾಯಿ ಮೌಲ್ಯದ ಚರಾಸ್ತಿ ಪತ್ತೆಯಾಗುವುದೆಂದರೆ, ಇದು ಯಾವ್ಯಾವ ಮೂಲಗಳಿಂದ ಸಂಗ್ರಹಿಸಿದ ಅಕ್ರಮ ಹಣ ಎಂಬುದನ್ನು ಒತ್ತಿ ಹೇಳುವ ಅಗತ್ಯವಿಲ್ಲ. ನೀತಿಗೆಟ್ಟ ಕೆಪಿಎಸ್‌ಸಿ ಅನ್ನು ಸರಿದಾರಿಗೆ ತರಲು ಪರಿಹಾರವಿಲ್ಲ ಎಂದಲ್ಲ. ಈಗಲಾದರೂ ಶಾಸನಸಭೆಯಲ್ಲಿ ಪಕ್ಷಭೇದ ಮರೆತು ಕೆಪಿಎಸ್‌ಸಿಗೆ ಅಂಟಿರುವ ಮಹಾಕಳಂಕವನ್ನು ತೊಳೆಯಲು ಜನಪ್ರತಿನಿಧಿಗಳು ಮುಂದಾಗಲಿ. ಓರ್ವ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೇ ಅಧ್ಯಕ್ಷ ಸ್ಥಾನಕ್ಕೆ ಅರ್ಹರೆಂದು ಹೊಸ ನಿಯಮಾವಳಿ ರಚನೆಯಾಗಲಿ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಆಯೋಗಕ್ಕೆ ಸರ್ಕಾರ ಮುಕ್ತ ಅವಕಾಶ ಕಲ್ಪಿಸಲಿ. ನೇಮಕಾತಿ ವಿಚಾರದಲ್ಲಿ ಸರ್ಕಾರ ಯಾವ ಬಗೆಯ ಹಸ್ತಕ್ಷೇಪವನ್ನೂ ನಡೆಸದ ಕಟುಶಾಸನವನ್ನು ಜಾರಿಗೆ ತರಲಿ.


