ಬೆಂಗಳೂರು: ವಿಫಲ ಹಾಗೂ ನಿರುಪಯುಕ್ತ ತೆರೆದ ಕೊಳವೆಬಾವಿಗಳಿಂದ ಮಕ್ಕಳು ಮತ್ತು ಮೂಕಜೀವಿಗಳು ಆಕಸ್ಮಿಕವಾಗಿ ಅಪಘಾತಕ್ಕೀಡಾಗುವ ದುರ್ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದೆ. ರಾಜ್ಯವನ್ನು ‘ತೆರೆದ ಕೊಳವೆಬಾವಿ ಮುಕ್ತ ಕರ್ನಾಟಕ’ವನ್ನಾಗಿ ಮಾಡುವ ಗುರಿಯೊಂದಿಗೆ ರಾಜ್ಯಾದ್ಯಂತ ‘ಕೊಳವೆಬಾವಿ ಸುರಕ್ಷತಾ ಅಭಿಯಾನ’ವನ್ನು ಆರಂಭಿಸಲು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಮುಂದಾಗಿದ್ದಾರೆ.
ಈ ಅಭಿಯಾನದ ರೂಪುರೇಷೆ, ಅನುಷ್ಠಾನ ವಿಧಾನ, ಇಲಾಖಾವಾರು ಮಾಹಿತಿ ಸಂಗ್ರಹ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಯೋಜನೆಯನ್ನು ಶೀಘ್ರವೇ ಸಿದ್ಧಪಡಿಸುವಂತೆ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಭಿಯಾನದ ರೂಪುರೇಷೆ
ಮಕ್ಕಳ ರಕ್ಷಣೆಗೆ ಆಧ್ಯತೆ: “ಒಂದು ತೆರೆದ ಕೊಳವೆಬಾವಿಯೂ ಮಗುವಿನ ಜೀವಕ್ಕೆ ಅಪಾಯವಾಗಬಾರದು” ಎಂಬ ಸ್ಪಷ್ಟ ಸಂದೇಶವನ್ನು ನೀಡಿರುವ ಸಚಿವರು, ವಿಫಲ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವುದು ಕಡ್ಡಾಯ ಎಂದಿದ್ದಾರೆ.
ಹಂತ ಹಂತವಾಗಿ ಕಾರ್ಯಾಚರಣೆ: ಮೊದಲ ಹಂತದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದಲೇ ಕೊರೆಸಿರುವ ಎಲ್ಲ ವಿಫಲ ಮತ್ತು ನಿರುಪಯುಕ್ತ ಕೊಳವೆಬಾವಿಗಳನ್ನು ಗುರುತಿಸಿ, ಅವುಗಳನ್ನು ಸುರಕ್ಷಿತವಾಗಿ ಮುಚ್ಚಲಾಗಿದೆಯೇ ಎಂದು ಪರಿಶೀಲಿಸಲಾಗುವುದು.
ಇಲಾಖೆಗಳ ನಡುವೆ ಸಮನ್ವಯತೆ :ಮುಂದಿನ ಹಂತದಲ್ಲಿ ಇತರೆ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿರುವ ತೆರೆದ ಕೊಳವೆಬಾವಿಗಳ ಸಮಗ್ರ ಮಾಹಿತಿ ಸಂಗ್ರಹಿಸಿ ಸುರಕ್ಷಿತಗೊಳಿಸಲಾಗುತ್ತದೆ.
ಸಾರ್ವಜನಿಕರ ಸಹಭಾಗಿತ್ವ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ಅಪಾಯಕಾರಿ ತೆರೆದ ಕೊಳವೆಬಾವಿಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯಲು ವಾಟ್ಸಾಪ್ ಸಂಖ್ಯೆ, ವೆಬ್ ಆಧಾರಿತ ವರದಿ ವ್ಯವಸ್ಥೆ, ಜಿಯೋ-ಟ್ಯಾಗ್ಡ್ ಚಿತ್ರಗಳು ಹಾಗೂ ದೂರು ದಾಖಲಾದಾಗಿನಿಂದ ಅದು ಮುಚ್ಚಲ್ಪಡುವವರೆಗೆ ಟ್ರ್ಯಾಕ್ ಮಾಡುವ ಸುಧಾರಿತ ವ್ಯವಸ್ಥೆಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳಂತೆ ರಾಜ್ಯದಲ್ಲೂ ಅಗತ್ಯ ಸುರಕ್ಷತಾ ಕ್ರಮಗಳು ಹಾಗೂ ಮೇಲ್ವಿಚಾರಣಾ ವ್ಯವಸ್ಥೆಗೆ ಕಾನೂನುಬದ್ಧ ಅವಕಾಶವಿದ್ದರೂ, ದಾಖಲೆಗಳಿಗೆ ಬಾರದ ಅಥವಾ ಸಮರ್ಪಕವಾಗಿ ಮುಚ್ಚದೆ ಬಿಟ್ಟಿರುವ ಕೊಳವೆಬಾವಿಗಳನ್ನು ಪತ್ತೆ ಹಚ್ಚಿ ಸಂಪೂರ್ಣವಾಗಿ ಮುಚ್ಚಿಸುವುದು ಸರ್ಕಾರದ ದೃಢ ಸಂಕಲ್ಪವಾಗಿದೆ.
ಈ ಮಹತ್ವದ ಅಭಿಯಾನಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ **ರಾಜೇಶ್ ಅಮ್ಮಿನಬಾವಿ** ಹಾಗೂ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಚಿವರು ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ.
#OpenBorewellSafety #KarnatakaNews #DrAjayDharmsingh #MinorIrrigation #UdayakalaNews #SaveChildren #GroundwaterDepartment #SafeKarnataka #BorewellAccidents #GovernmentOfKarnataka


