Menu

ಬಿಜೆಪಿ ನಾಯಕರ ಕುತಂತ್ರ ರಾಜಕಾರಣದ ವಿರುದ್ಧ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ‘ಫಾರ್ಮ್ 7’ (Form 7) ಅಳವಡಿಕೆ ಮೂಲಕ ಬಿಜೆಪಿ ನಾಯಕರು ಮತದಾರರ ಪಟ್ಟಿಯಿಂದ ಹೆಸರು ಕಡಿತಗೊಳಿಸುವ ದೊಡ್ಡ ಮಟ್ಟದ ಕುತಂತ್ರ ರಾಜಕೀಯ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಎನ್‌ಡಿಎ (NDA) ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ನ್ಯಾಯಯುತವಾಗಿ ಗೆಲ್ಲಬೇಕಾದದ್ದು, ಆದರೆ ಚುನಾವಣಾ ಆಯೋಗದ ಪ್ರಕ್ರಿಯೆಗಳನ್ನು ದುರುಪಯೋಗಪಡಿಸಿಕೊಂಡು ವೋಟ್ ಶಫಲ್ ಮಾಡುವುದು, ಬೇರೆ ಬೇರೆ ಬೂತ್‌ಗಳಿಗೆ ಮತಗಳನ್ನು ವರ್ಗಾಯಿಸುವುದು ಹಾಗೂ ದಲಿತರು, ಅಲ್ಪಸಂಖ್ಯಾತರು ಮತ್ತು ಬಡವರ ಮತಗಳನ್ನು ಕಿತ್ತುಹಾಕುವ ಕೃತ್ಯದಲ್ಲಿ ಬಿಜೆಪಿ ತೊಡಗಿರುವುದು ಅತ್ಯಂತ ಹೇಯ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರ ರಕ್ಷಣೆ ಹೊಸ ಡ್ರಾಮ!

ಬಿಜೆಪಿ ಮುಖಂಡರು ಈಗ ಅಮಾಯಕ ಕಾರ್ಯಕರ್ತರನ್ನು ರಕ್ಷಿಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದ ಡಿ.ಕೆ. ಶಿವಕುಮಾರ್, “ಒಂದೇ ಕುಟುಂಬದ ಗಂಡ, ಹೆಂಡತಿ ಮತ್ತು ಮಗ ಮೂವರ ಹೆಸರು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಲಾಗಿದೆ. ಮಾಧ್ಯಮಗಳೇ ಇದನ್ನು ಪರಿಶೀಲಿಸಿವೆ. ಬೆಳಗಾವಿ, ಬಬಲೇಶ್ವರ, ಶೃಂಗೇರಿ, ಬಳ್ಳಾರಿ, ಜಯನಗರ ಸೇರಿದಂತೆ ಹಲವೆಡೆ ಇದು ಸಾಬೀತಾಗಿದೆ. ವಿಜಯೇಂದ್ರ ಹಾಗೂ ಆರ್. ಅಶೋಕ್ ಅವರೇ ಇದಕ್ಕೆಲ್ಲಾ ಕುಮ್ಮಕ್ಕು ನೀಡಿರಬಹುದು. ‘ಆನೆ ಕದ್ದವನು ಕಳ್ಳ, ಅಡಿಕೆ ಕದ್ದವನು ಕಳ್ಳ’ ಎಂಬಂತೆ ಬಿಜೆಪಿ ನಾಯಕರ ನಡೆ ಇದೆ” ಎಂದು ತರಾಟೆಗೆ ತೆಗೆದುಕೊಂಡರು.

ಮತದಾರರ ಹಕ್ಕಿನ ರಕ್ಷಣೆ ನಮ್ಮ ಜವಾಬ್ದಾರಿ

“ನಮ್ಮ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಒಬ್ಬ ಸಿಎಂ ಆಗಿ, ಪ್ರಜಾಪ್ರತಿನಿಧಿಯಾಗಿ ಜನರಿಗೆ ಮತದಾನದ ಹಕ್ಕು ದೊರಕಿಸಿಕೊಡುವುದು ನಮ್ಮ ಜವಾಬ್ದಾರಿ. ಇದನ್ನು ಅಧಿಕಾರ ದುರುಪಯೋಗ ಎಂದು ಅವರು ತಿಳಿದುಕೊಂಡರೂ ಪರವಾಗಿಲ್ಲ, ಏನೇನು ಬೇಕಾದರೂ ಹೇಳಿಕೊಳ್ಳಲಿ” ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
#DKShivakumar #KarnatakaPolitics #Form7Controversy #BJPLeaders #CongressVsBJP #UdayakalaNews #KarnatakaNews #ElectionCommission

Related Posts

Leave a Reply

Your email address will not be published. Required fields are marked *