ಕಸ್ತೂರಿರಂಗನ್ ವರದಿಯಿಂದ ಪಶ್ಚಿಮ ಘಟ್ಟಗಳ ಜನತೆಗೆ ವಿನಾಯ್ತಿ ದೊರೆತರೆ ಇದು ಡಿ ಕೆ ಶಿವಕುಮಾರ್ ಮತ್ತು ಇವರ ಸಾರಥ್ಯದ ಸರ್ಕಾರದ ಮಹತ್ತರ ಸಾಧನೆಯಾದೀತು. ಅರ್ಧ ಶತಮಾನದಿಂದಲೂ ತಮ್ಮ ಬದುಕನ್ನು ಅರಣ್ಯದ ಸಾನಿಧ್ಯನಲ್ಲಿ ಕಟ್ಟಿಕೊಂಡ ಜನತೆಯ ಬವಣೆಯನ್ನು ಯಾವ ಜನಪರ ಸರ್ಕಾರವೂ ಧಿಕ್ಕರಿಸಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ
ನಾಡಿನ ಜನತೆಯತ್ತ ಸರ್ಕಾರ ನಡೆಯಬೇಕು. ಇದು ಇಂದಿನ ರಾಜನೀತಿಯೇನೂ ಅಲ್ಲ. ಆದರ್ಶ ರಾಜ್ಯಕ್ಕೆ ಪ್ರತೀಕವಾದ ತ್ರೇತಾಯುಗದ ಶ್ರೀರಾಮಚಂದ್ರನ ಕಾಲದಿಂದಲೂ ಈ ರಾಜನೀತಿ ಭಾರತದಲ್ಲಿ ಆಚರಣೆಯಲ್ಲಿದೆ. ರಾಜ್ಯದ ರಾಜಕಾರಣದ ಇತಿಹಾಸದಲ್ಲಿ ನಾಡಿನ ಕಡಲ ಕಿನಾರೆಯಲ್ಲಿ ಮಂತ್ರಿಮಂಡಲ ಸಭೆ ನಡೆದಿದೆ. ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವು ಹತ್ತು ಸಮಸ್ಯೆಗಳು ಸಂಪುಟ ಸಭೆಯಲ್ಲಿ ಚರ್ಚೆಯಾಗಿವೆ, ಮಿಗಿಲಾಗಿ ಈ ಸಮಸ್ಯೆಗಳಿಗೆ ಪರಿಹಾರವೂ ದೊರೆತಿದೆ.
ಕರ್ನಾಟಕದ ಪ್ರಗತಿ ಎಂದರೆ ಬರೀ ಬೆಂಗಳೂರು ಮತ್ತು ಇದರ ಸುತ್ತಲಿನ ಭಾಗಗಳ ಅಭಿವೃದ್ಧಿ ಅಲ್ಲ. ನಾಡಿನ ಪ್ರಗತಿ ಎಂದರೆ ಸರ್ಕಾರಕ್ಕೆ ಕರಾವಳಿ ಸೇರಿದಂತೆ ಎಲ್ಲ ಪ್ರಾಂತ್ಯಗಳ ಏಳಿಗೆಯೂ ಹೌದು. ನಾಡಿನ ೧೦-೧೨ ಕಡೆ ಇನ್ನು ಮುಂದೆ ಮಂತ್ರಿಮಂಡಲ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿರುವುದು ಗಮನಾರ್ಹ. ಈ ದಿಶೆಯಲ್ಲಿ ಮುಂದಿನ ದಿನಗಳಲ್ಲಿ ಬೀದರ್, ರಾಯಚೂರು ಹಾಗೂ ಕೋಲಾರದಂತಹ ಗಡಿಭಾಗದ ಜಿಲ್ಲೆಗಳಲ್ಲಿಯೂ ಸಂಪುಟ ಸಭೆಯಾದರೆ ಒಳಿತು.
ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ ಎರಡನೆ ರಾಜ್ಯ ಭಾಷೆಯ ಸ್ಥಾನ ಮಾನ ನೀಡುವ ತೀರ್ಮಾನವಾಗಿದೆ. ಇದು ಕರಾವಳಿ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತು. ಇಂತಹ ತೀರ್ಮಾನದಿಂದ ಕರಾವಳಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದಂತಾಗಿರುವುದು ನಿಜ. ಇದೇ ವೇಳೆ ಕರಾವಳಿ ಭಾಗದ ಸೇತುವೆ, ರಸ್ತೆ ಮತು ಮೀನುಗಾರಿಕೆ ಅಲ್ಲದೆ ಪ್ರವಾಸದ ಅಭಿವೃದ್ದಿಗೆ ಸಂಬಂಧಿಸಿದ ವಿಷಯಗಳಿಗೆ ಸಂಪುಟ ಒತ್ತು ಸೂಕ್ತ ಅನುದಾನವನ್ನು ನೀಡಲು ಒಪ್ಪಿದೆ. ಇವೆಲ್ಲವೂ ಒಂದೇ ಸಂಪುಟ ಸಭೆಯಲ್ಲಿ ತೀರ್ಮಾನಗೊಂಡು ಪ್ಯಾಕೇಜ್ ರೂಪದಲ್ಲಿ ಕರಾವಳಿಗೆ ಭರ್ಜರಿ ಕೊಡುಗೆ ಲಭಿಸಿರುವುದು ಗಮನಾರ್ಹ.
ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ನಲವತ್ತು, ಐವತ್ತು ವರ್ಷಗಳಿಂದಲೂ ಅರಣ್ಯ ಒತ್ತುವರಿ ಸಮಸ್ಯೆ ಮುಂದುವರಿದಿದೆ. ಸರ್ಕಾರಗಳ ಕಾಲಕಾಲಿಕ ನಿರ್ಧಾರ ಮತ್ತು ಅರಣ್ಯ ಕಾಯಿದೆಗಳ ಕಟ್ಟು ನಿಟ್ಟಿನ ಅಂಶಗಳಿಂದ ಇಂದು ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಕಾಪಾಡುವಿಕೆ- ಇವೆರೆಡೂ ಸರ್ಕಾರಕ್ಕೆ ಪ್ರಮುಖ ಸವಾಲಾಗಿದೆ. ಈ ದಿಶೆಯಲ್ಲಿ ಮುಖ್ಯಮಂತ್ರಿ ಶಿವಕುಮಾರ್ ತಾರ್ಕಿಕ ಹೆಜ್ಜೆಗಳನ್ನಿಟ್ಟಿರುವುದು ಗಮನಾರ್ಹ.
ಪರಿಸರ ಸೂಕ್ಷ್ಮ ವಲಯ ಸಂರಕ್ಷಣೆ ಪರವಾಗಿ ಬಲವಾಗಿ ನಿಂತಿರುವ ಡಾ. ಕಸ್ತೂರಿ ರಂಗನ್ ವರದಿಗೆ ವಿರುದ್ದವಾಗಿ ಈ ಭಾಗದ ಜನತೆ ಧ್ವನಿ ಎತ್ತಿದ್ದಾರೆ. ದಶಕಗಳಿಂದಲೂ ಸರ್ಕಾರ ಭೂ ರಹಿತರು ಮತ್ತು ದೀನ, ದಲಿತ ಮತ್ತು ಬುಡಕಟ್ಟು ಸಮುದಾಯಗಳಿಗೆ ಸಾಮಾಜಿಕ , ಆರ್ಥಿಕ ಹಿತವನ್ನು ಕಾಪಾಡಲು ಅರಣ್ಯ ಭೂಮಿಯನ್ನು ಮಂಜೂರು ಮಾಡಿರುವುದು ಸರಿಯಷ್ಟೆ . ಈಗ ಇಂತಹ ಸಾವಿರಾರು ಕುಟುಂಬಗಳನ್ನು ಅವರಿಗೆ ಯಾವುದೇ ಪರಿಹಾರ ಮತ್ತು ಪರ್ಯಾಯ ವಿಲ್ಲದೆ ತೆರವುಗೊಳಿಸಲು ಸಾಧ್ಯವೇ ? ಅರ್ಧ ಶತಮಾನದಿಂದಲೂ ತಮ್ಮ ಬದುಕನ್ನು ಅರಣ್ಯದ ಸಾನಿಧ್ಯನಲ್ಲಿ ಕಟ್ಟಿಕೊಂಡ ಜನತೆಯ ಬವಣೆಯನ್ನು ಧಿಕ್ಕರಿಸಿ ಯಾವ ಜನಪರಸರ್ಕಾರವೂ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಈ ಮಟ್ಟಿಗೆ ಕಸ್ತೂರಿರಂಗನ್ ವರದಿಯಿಂದ ಪಶ್ಚಿಮ ಘಟ್ಟಗಳ ಜನತೆಗೆ ವಿನಾಯ್ತಿ ದೊರೆತರೆ ಅದು ಕೆ ಶಿವಕುಮಾರ್ ಮತ್ತು ಇವರ ಸಾರಥ್ಯದ ಸರ್ಕಾರಕ್ಕೆ ಭವಿಷ್ಯದಲ್ಲಿ ದೊರೆಯುವ ಬಹುದೊಡ್ಡ ಕೊಡುಗೆ.


