ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ಜನತೆಗೆ ರಾಜ್ಯ ಸರ್ಕಾರವು ಮತ್ತೊಂದು ಆಘಾತ ನೀಡಿದೆ. ಬಹುನಿರೀಕ್ಷಿತ ಹಾಗೂ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಿಸುವ ಮಹತ್ವದ ತೀರ್ಮಾನವೊಂದಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಹಾಲಿನ ದರವನ್ನು ಪ್ರತಿ ಲೀಟರ್ಗೆ ರೂ.8 ರಷ್ಟು ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದರೊಂದಿಗೆ ಬಸ್ ಟಿಕೆಟ್ ದರವನ್ನು ಕೂಡ ಹೆಚ್ಚಳ ಮಾಡಲು ಸಮ್ಮತಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ನವೆಂಬರ್ 1 ರಿಂದ ಪರಿಷ್ಕೃತ ದರ ಜಾರಿಗೆ ಸಾಧ್ಯತೆ
ಬಹುತೇಕ ನವೆಂಬರ್ 1 ರಿಂದ ರಾಜ್ಯದಲ್ಲಿ ಹಾಲಿನ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ. ಒಕ್ಕೂಟಗಳ ಮನವಿಯಂತೆ 80:20ರ ಅನುಪಾತದಂತೆ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಅಂದರೆ, ಹಾಲಿನ ದರದಲ್ಲಿ ಒಟ್ಟು ರೂ. 8 ಹೆಚ್ಚಳವಾದರೆ, ಅದರಲ್ಲಿ ರೂ.6 ನೇರವಾಗಿ ರೈತರಿಗೆ ತಲುಪಲಿದ್ದು, ಉಳಿದ ರೂ.2 ಒಕ್ಕೂಟಗಳಿಗೆ ಲಭಿಸಲಿದೆ. ಒಕ್ಕೂಟಗಳು 70:30ರ ಅನುಪಾತದಲ್ಲಿ ಹೆಚ್ಚಳ ಮಾಡಲು ಮನವಿ ಸಲ್ಲಿಸಿದ್ದರೂ, ಅಂತಿಮವಾಗಿ 80:20ರ ಸೂತ್ರದಂತೆ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ.
ಚುನಾವಣಾ ಆಯೋಗದ ಅನುಮೋದನೆಗೆ ನಿರೀಕ್ಷೆ
ಹಾಲಿನ ದರ ಹಾಗೂ ಬಸ್ ಟಿಕೆಟ್ ದರ ಎರಡನ್ನೂ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದ್ದರೂ, ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆ ಮಾಡದಿರಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಪ್ರಸ್ತಾಪ ಕಳುಹಿಸಿ, ಅಲ್ಲಿಂದ ಅಧಿಕೃತ ಅನುಮತಿ ಸಿಕ್ಕ ಬಳಿಕವಷ್ಟೇ ದರ ಏರಿಕೆಯ ಬಗ್ಗೆ ಸ್ಪಷ್ಟ ಘೋಷಣೆ ಹೊರಡಿಸಲು ನಿರ್ಧರಿಸಲಾಗಿದೆ. ಹಾಲಿನ ಹೊಸ ದರಗಳ ಸಂಭಾವ್ಯ ಪಟ್ಟಿ (ಪ್ರತಿ ಲೀಟರ್ಗೆ) ಹೀಗಿರಲಿದೆ
ಟೋನ್ಡ್ ಹಾಲು:₹46 ರಿಂದ ₹54 ಕ್ಕೆ
ಹೋಮೋಜಿನೈಸ್ಡ್ ಟೋನ್ಡ್ ಹಾಲು: ₹47 ರಿಂದ ₹55 ಕ್ಕೆ
ಹೋಮೋಜಿನೈಸ್ಡ್ ಹಸುವಿನ ಹಾಲು: ₹50 ರಿಂದ ₹58 ಕ್ಕೆ
ಶುಭಂ ಹಾಲು: ₹52 ರಿಂದ ₹60 ಕ್ಕೆ
ಸಮೃದ್ಧಿ ಹಾಲು: ₹55 ರಿಂದ ₹64 ಕ್ಕೆ
ಸ್ಪೆಷಲ್ ಹಾಲು: ₹52 ರಿಂದ ₹60 ಕ್ಕೆ
ಡಬಲ್ ಟೋನ್ಡ್ ಹಾಲು: ₹43 ರಿಂದ ₹51 ಕ್ಕೆ
ಆರೆಂಜ್ ಪ್ಯಾಕೆಟ್ (ಹಸುವಿನ ಹಾಲು): ₹50 ರಿಂದ ₹58 ಕ್ಕೆ
ಗ್ರೀನ್ ಸ್ಪೆಷಲ್ ಹಾಲು: ₹50 ರಿಂದ ₹58 ಕ್ಕೆ
ನಾರ್ಮಲ್ ಗ್ರೀನ್ (ಹಸುವಿನ ಹಾಲು): ₹50 ರಿಂದ ₹58 ಕ್ಕೆ
ಒಟ್ಟಾರೆ ಕಾಫಿ, ಟೀ ಪ್ರಿಯರು ಹಾಗೂ ಹಾಲು ಸೇವಿಸುವವರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಜನರು ಬೇಸತ್ತಿದ್ದಾರೆ.
#MilkPriceHike #NandiniMilk #KarnatakaCabinet #BusFareHike #UdayakalaNews #KarnatakaNews #PriceRise #DKShivakumar #BangaloreNews #LatestNewsKannada


