Menu

ದಸರಾದಲ್ಲಿ ಕಂಬಳಕ್ಕೆ ತೀವ್ರ ವಿರೋಧ: ಕಂಬಳದ ಸ್ಥಳದಲ್ಲೇ ಖಾಲಿ ಕೊಡ ಹಿಡಿದು ಪ್ರತಿಭಟನೆ

ಉದಯಕಾಲ ನ್ಯೂಸ್, ಮೈಸೂರು: ಬರಗಾಲದ ಪರಿಸ್ಥಿತಿಯ ನಡುವೆ ಮೈಸೂರು ದಸರಾದಲ್ಲಿ ಕರಾವಳಿಯ ಸಂಪ್ರದಾಯವಾದ ‘ಕಂಬಳ’ ಆಯೋಜನೆ ಮಾಡಿರುವುದನ್ನು ವಿರೋಧಿಸಿ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಕಂಬಳ ನಡೆಯುವ ಸ್ಥಳದಲ್ಲೇ ಖಾಲಿ ಕೊಡಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಉದ್ದೇಶಿತ ಕಂಬಳ ನಡೆಯುವ ಜಾಗದಲ್ಲಿ ಜಮಾಯಿಸಿದ ಪರಿಸರ ಪ್ರೇಮಿಗಳು, ಪರಿಸರವಾದಿಗಳು, ರೈತ, ದಲಿತ, ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಕನ್ನಡಪರ ಹೋರಾಟಗಾರರು ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಧರಣಿ ನಡೆಸಿದರು.

ಬಡಗಲಪುರ ನಾಗೇಂದ್ರ ಆಕ್ರೋಶ

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ “ಕಂಬಳ ಬೇಡವೆಂದು ಕಳೆದ ಎರಡು ತಿಂಗಳಿಂದಲೂ ನಾವು ಧ್ವನಿ ಎತ್ತುತ್ತಲೇ ಇದ್ದೇವೆ. ಆದರೆ, ನಾಗರಿಕರ ಮಾತನ್ನು ಕೇಳದ ಸರ್ಕಾರ ಅನಾಗರಿಕ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದೆ. ಮೈಸೂರಿನ ಜನರು ಬಹಳ ಹೃದಯವಂತರು. ಕಂಬಳ ಈ ನೆಲದ ಆಚರಣೆಯಲ್ಲ, ಅದು ಕರಾವಳಿ ಭಾಗದ ಆಚರಣೆ. ಬೇಕಿದ್ದರೆ ಅಲ್ಲೇ ಮಾಡಿಕೊಳ್ಳಲಿ, ಅದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ಆದರೆ, ರಾಜ್ಯದಲ್ಲಿ ಭೀಕರ ಬರಗಾಲವಿರುವ ಈ ಸಂದರ್ಭದಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ಕಂಬಳ ಆಚರಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ” ಎಂದರು.

ಮುಂದುವರಿದು, “ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆ ಬೇಡವೆಂದು ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕರಾವಳಿ ನಮಗೆ ದೂರವೇನಿಲ್ಲ, ಇಲ್ಲಿಂದ ಕೇವಲ 6 ಗಂಟೆ ದೂರದ ಪ್ರಯಾಣವಷ್ಟೇ. ಅಲ್ಲಿ ಭೌಗೋಳಿಕವಾಗಿ ಸಿದ್ಧವಾದ ನೆಲ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳಿವೆ. ಕಂಬಳವು ಕರಾವಳಿಯ ಸಂಸ್ಕೃತಿಯಾಗಿದ್ದು, ಅಲ್ಲಿ ಮಾಡಿದರೆ ಮಾತ್ರ ಚೆಂದ! ನಾವೆಲ್ಲ ಬೇಕಿದ್ದರೆ ಅಲ್ಲಿಗೆ ಹೋಗಿ ಕಂಬಳ ವೀಕ್ಷಣೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಬೇಡ, ಮುಖ್ಯಮಂತ್ರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕಂಬಳ ಆಯೋಜಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು” ಎಂದು ಆಗ್ರಹಿಸಿದರು.

ಪರಶುರಾಮೇಗೌಡ ಕಿಡಿಕಿಡಿ!

‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, “ಕಂಬಳವನ್ನು ನಾವು ಸುಖಾಸುಮ್ಮನೆ ಹಾಗೂ ಆಧಾರವಿಲ್ಲದೆ ವಿರೋಧಿಸುತ್ತಿಲ್ಲ. ಕಂಬಳವನ್ನು ವಿರೋಧಿಸಲು ಪ್ರಮುಖವಾಗಿ ಮೂರು ಕಾರಣಗಳಿವೆ” ಎಂದು ವಿವರಿಸಿದರು
ನಿರ್ವಹಣಾ ಲೋಪ: ದಸರಾದಲ್ಲಿ ಈಗಾಗಲೇ ಸಾಂಪ್ರದಾಯಿಕ ಹಾಗೂ ಕಿಕ್ಕಿರಿದ ಕಾರ್ಯಕ್ರಮಗಳಿರುತ್ತವೆ. ಅವುಗಳನ್ನೇ ಅಚ್ಚುಕಟ್ಟಾಗಿ ನಿರ್ವಹಿಸಲು ವಿಫಲವಾಗಿರುವಾಗ, ಇದರ ನಡುವೆ ಇಷ್ಟೊಂದು ದೊಡ್ಡ ಪ್ರಮಾಣದ ಸಾಂಸ್ಕೃತಿಕ ಕ್ರೀಡೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ದಸರಾ ಸಂದರ್ಭದಲ್ಲಿ ಕಂಬಳ ಕ್ರೀಡೆಯ ಅವಶ್ಯಕತೆಯಿರಲಿಲ್ಲ.
ಪರಿಸರ ನಾಶ: ಕಂಬಳ ನಡೆಸುವ ಟ್ರ್ಯಾಕ್‌ಗಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಈ ಕುರಿತು ಈಗಾಗಲೇ ಎಫ್‌ಐಆರ್ (FIR) ಕೂಡ ದಾಖಲಾಗಿದೆ. ಈ ನಿರ್ದಿಷ್ಟ ಜಾಗವು ಕಂಬಳ ನಡೆಸಲು ಮೀಸಲಾದ ಸ್ಥಳವಲ್ಲ, ಬದಲಿಗೆ ಉದ್ದೇಶಿತ ಉದ್ಯಾನವನ (Park) ನಿರ್ಮಾಣಕ್ಕಾಗಿ ನಿಗದಿಯಾಗಿದ್ದ ಜಾಗವಾಗಿದೆ.
ದುಂದು ವೆಚ್ಚ: ರಾಜ್ಯದಲ್ಲಿ ಭೀಕರ ಬರಗಾಲವಿರುವ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ, ಸರ್ಕಾರ ಕೋಟ್ಯಂತರ ಹಣವನ್ನು ಪೋಲು ಮಾಡಿ ಕಂಬಳ ನಡೆಸುವ ಅಗತ್ಯವಿರಲಿಲ್ಲ” ಎಂದು ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
#MysuruDasara #KambalaProtest #BadagalapuraNagendra #Parashuramegowda #MysoreNews #UdayakalaNews #KarnatakaDrought #Dasara2026

Related Posts

Leave a Reply

Your email address will not be published. Required fields are marked *