Menu

ಯುನೆಸ್ಕೊ ತಜ್ಞರಿಂದ ಹಂಪಿ ಸ್ಮಾರಕಗಳ ವೀಕ್ಷಣೆ: ಸಂರಕ್ಷಣಾ ಕ್ರಮಗಳಿಗೆ ಒತ್ತು!

ಉದಯಕಾಲ ನ್ಯೂಸ್, ವಿಜಯನಗರ/ಗಂಗಾವತಿ: ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ಸಂರಕ್ಷಣಾ ಕ್ರಮಗಳನ್ನು ಪರಿಶೀಲಿಸುತ್ತಿರುವ ಯುನೆಸ್ಕೊ ತಜ್ಞರ ತಂಡವು ಭಾನುವಾರ ಪ್ರಸಿದ್ಧ ವಿಜಯ ವಿಠ್ಠಲ ದೇವಸ್ಥಾನ, ಆನೆಗೊಂದಿ ಹಾಗೂ ಕೊಪ್ಪಳದ ಸುತ್ತಲಿನ ವಿಶ್ವ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳನ್ನು ಕೂಲಂಕಷವಾಗಿ ವೀಕ್ಷಿಸಿತು.
ಕೀನ್ಯಾದ ಜಾರ್ಜ್‌ ಅಬುಂಗ್‌ ಮತ್ತು ಜಪಾನ್‌ನ ಇಚಿಡಾ ಶಿಮೋಡಾ ನೇತೃತ್ವದ ಈ ತಂಡವು ಹಂಪಿಯ ಇತಿಹಾಸ, ವಾಸ್ತುಶಿಲ್ಪದ ವೈಶಿಷ್ಟ್ಯಗಳು ಹಾಗೂ ಈವರೆಗೆ ಕೈಗೊಂಡಿರುವ ಸಂರಕ್ಷಣಾ ಕ್ರಮಗಳನ್ನು ಹತ್ತಿರದಿಂದ ಗಮನಿಸಿತು.

ವಿಜಯ ವಿಠ್ಠಲ ದೇಗುಲ ವೀಕ್ಷಣೆ

ತಂಡವು ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿರುವ ಪ್ರಸಿದ್ಧ ಕಲ್ಲಿನ ರಥ, ಸಂಗೀತ ಮಂಟಪ, ನೃತ್ಯ ಮಂಟಪ, ಕಲ್ಯಾಣ ಮಂಟಪ ಹಾಗೂ ಗರ್ಭಗುಡಿಗಳನ್ನು ಪರಿಶೀಲಿಸಿತು. ವಿಶೇಷವಾಗಿ ಸಂಗೀತ ಮಂಟಪದ ಕಲ್ಲಿನ ಕಂಬಗಳನ್ನು ಮೀಟಿ ಶಬ್ದವನ್ನು ಆಲಿಸಿ, ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಸ್ಥಳಗಳ ಚಿತ್ರಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು. ಯುನೆಸ್ಕೊ ತಜ್ಞರು ಯಾವುದೇ ವಿಶೇಷ ವ್ಯವಸ್ಥೆಯಿಲ್ಲದೆ ಸಾಮಾನ್ಯ ಪ್ರವಾಸಿಗರ ನಡುವೆಯೇ ಸ್ಮಾರಕಗಳನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ಭಾನುವಾರ ಬಿಸಿಲಿನ ವಾತಾವರಣವಿದ್ದ ಕಾರಣ ವೀಕ್ಷಣೆಗೆ ಹವಾಮಾನದಿಂದ ಯಾವುದೇ ಅಡಚಣೆಯಾಗಲಿಲ್ಲ.

ಅಂಜನಾದ್ರಿ ಹಾಗೂ ಆನೆಗೊಂದಿ ಭೇಟಿ

ಬೆಳಗ್ಗೆ ಅಂಜನಾದ್ರಿಗೆ ಭೇಟಿ ನೀಡಿದ ತಂಡ, ಬಳಿಕ ಆನೆಗುಂದಿ ಪ್ರದೇಶದ ಸ್ಮಾರಕಗಳು ಹಾಗೂ ಬಫರ್ ಜೋನ್ ಪ್ರದೇಶಗಳ ವಸ್ತುಸ್ಥಿತಿಯನ್ನು ವೀಕ್ಷಿಸಿತು. ನಂತರ ಗೆಜ್ಜಲ ಮಂಟಪದಿಂದ ಬ್ಯಾಟರಿ ಚಾಲಿತ ವಾಹನದಲ್ಲಿ ವಿಜಯ ವಿಠ್ಠಲ ದೇಗುಲ ಹಾಗೂ ಮಾಲ್ಯವಂತ ರಘುನಾಥ ದೇವಸ್ಥಾನಕ್ಕೆ ತೆರಳಿ ಮಾಹಿತಿ ಪಡೆದರು. ಕೊಪ್ಪಳ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ಒದಗಿಸಿದರು. ಹಂಪಿ ಸುತ್ತಲಿನ ಸಂರಕ್ಷಿತ ಪ್ರದೇಶದಲ್ಲಿ ಪರಂಪರೆ ಹಾಗೂ ರಕ್ಷಿತ ಸ್ಮಾರಕಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಅಭಿವೃದ್ಧಿ ಕೈಗೊಳ್ಳುವಂತೆ ಯುನೆಸ್ಕೊ ತಂಡ ಅಧಿಕಾರಿಗಳಿಗೆ ಸೂಚಿಸಿದೆ.

ಇಂದು ವಿರೂಪಾಕ್ಷ ದೇವಸ್ಥಾನ, ಕೃಷ್ಣ ದೇವಸ್ಥಾನ ಹಾಗೂ ಕಮಲಮಹಲ್‌ ಪ್ರದೇಶಗಳಿಗೆ ಭೇಟಿ. ಮಧ್ಯಾಹ್ನದ ನಂತರ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ನಲ್ಲಿ ಹಂಪಿ ಮಾಸ್ಟರ್‌ ಪ್ಲಾನ್‌ ಮತ್ತು ಸಮಗ್ರ ನಿರ್ವಹಣಾ ಯೋಜನೆಗಳ ಕುರಿತು ಸಮಾಲೋಚನೆ ನಡೆಯಲಿದೆ.ಅಕ್ಟೋಬರ್ 28ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ,ಎಎಸ್‌ಐ ಹಾಗೂ ಯುನೆಸ್ಕೊ ಪ್ರತಿನಿಧಿಗಳೊಂದಿಗೆ ತಂಡವು ಹಂಪಿ ಸ್ಮಾರಕ ಸಂರಕ್ಷಣೆಯ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಲಿದೆ.
#Hampi #UNESCO #VijayaVitthalaTemple #AnjanadriHills #Anegundi #KarnatakaHeritage #ASI #UdaykalaNews #HistoricalMonuments #Vijayanagara

Related Posts

Leave a Reply

Your email address will not be published. Required fields are marked *