ಉದಯಕಾಲ ನ್ಯೂಸ್, ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಂದೆಯ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಇಂದು ದೇಶಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀಕೃಷ್ಣ ಸಿಂಗ್ ಅವರ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ಪಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಭಾಗವಹಿಸಿದ್ದರು. ಈ ವೇಳೆ ಸಭಿಕರೊಬ್ಬರು ಪ್ರಧಾನಿ ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, `ಮೋದಿ ಕಾ ಬಾಪ್ ಭೀ ಜಾಯೇಗಾ’ (ಮೋದಿ ಅಪ್ಪನೂ ಹೋಗಬೇಕು) ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಮಾತುಗಳು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿವೆ.
ದೇಶಾದ್ಯಂತ ಪ್ರತಿಭಟನೆ
ಪ್ರಧಾನಿ ಮೋದಿ ಅವರ ದಿವಂಗತ ತಂದೆಯ ಬಗ್ಗೆ ಖರ್ಗೆ ನೀಡಿರುವ ಅವಮಾನಕರ ಮತ್ತು ಅಸಭ್ಯ ಹೇಳಿಕೆಯನ್ನು ಖಂಡಿಸಿ, ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿರುವ ಪಕ್ಷದ ಕಚೇರಿಗಳ ಮುಂದೆ ಇಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.ರಾಜಕೀಯ ನಾಯಕರು ಆಡಳಿತ ಮತ್ತು ನೀತಿಗಳ ಬಗ್ಗೆ ಟೀಕೆ ಮಾಡಬೇಕೆ ಹೊರತು, ಕುಟುಂಬದ ಸದಸ್ಯರನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಅವಮಾನಿಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಈ ಹೇಳಿಕೆಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೂರು ದಾಖಲು
ಖರ್ಗೆ ಅವರ ಹೇಳಿಕೆಯ ವಿರುದ್ಧ ಬಿಹಾರದ ಬಿಜೆಪಿ ಕಾರ್ಯಕರ್ತರೊಬ್ಬರು ಭಾನುವಾರ ಸಂಜೆ ಪಟ್ನಾದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಘಟನೆಯು ಗಾಂಧಿ ಮೈದಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ, ದೂರನ್ನು ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವ ಮತ್ತು ಸಭ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ ಎಂದು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
#MallikarjunKharge #NarendraModi #BJPProtest #Congress #PatnaNews #UdaykalaNews #PoliticalControversy #IndianPolitics #BJP


