ಉದಯಕಾಲ ನ್ಯೂಸ್, ಮೈಸೂರು: ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿದ್ದು ನಾಡಿನೆಲಲೆಡೆ ದೊಡ್ಡ ಸುದ್ದಿಯಾಗಿತ್ತು. ಈ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯೆ ನೀಡಿದ್ದು, ಇದರಿಂದ ನಾಡಿಗೆ ಯಾವುದೇ ಕೆಡುಕು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಜ್ಯೋತಿಷ್ಯವನ್ನಲ್ಲ, ನಾವು ದೇವರನ್ನು ನಂಬಿದ್ದೇವೆ!
ನಾವು ದೇವರನ್ನು ನಂಬಿದ್ದೇವೆ ಹೊರತು ಜ್ಯೋತಿಷ್ಯವನ್ನಲ್ಲ. ಜ್ಯೋತಿಷ್ಯ ನಂಬಿ ಪೂಜೆ ಮಾಡುವುದಿಲ್ಲ; ಕೇವಲ ದೇವರನ್ನು ಮಾತ್ರ ನಂಬುತ್ತೇವೆ. ಇದಕ್ಕೆ ಏನೇನೋ ಅರ್ಥಗಳನ್ನು ಕಲ್ಪಿಸಬೇಡಿ. ಈ ವಿಚಾರದ ಬಗ್ಗೆ ಒಂದೆರಡು ದಿನಗಳಲ್ಲಿ ನಾನೇ ಸಂಪೂರ್ಣ ವಿವರಣೆ ನೀಡುತ್ತೇನೆ ಎಂದು ಪ್ರಮೋದಾದೇವಿ ತಿಳಿಸಿದರು.
ಎಲ್ಲಾ ಘಟನೆಗಳ ವರದಿಯನ್ನು ತರಿಸಿಕೊಳ್ಳುತ್ತಿದ್ದು, ಎಲ್ಲಿ ಏನೇನಾಯಿತು ಎಂಬುದು ತಮಗೆ ತಿಳಿದಿದೆ. ಆದರೂ ಸಂಪೂರ್ಣ ಮಾಹಿತಿ ಬಂದ ಬಳಿಕ ಮಾತನಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಮುಹೂರ್ತ ಮೀರಿ ವಿಧಿವಿಧಾನಗಳಿಲ್ಲ
ನಮ್ಮ ಮನೆಯ ವಿಧಿವಿಧಾನಗಳು ಆಯಾ ಮುಹೂರ್ತಕ್ಕೇ ನಡೆಯಬೇಕು. ಮುಹೂರ್ತ ಮೀರಿ ನಾವು ಯಾವುದೇ ಕಾರ್ಯ ನಡೆಸುವುದಿಲ್ಲ. ಹೀಗಾಗಿ ಜಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಲಾಗಿದೆ. ಈ ವಿಚಾರದಲ್ಲಿ ನಾನು ಯಾವ ಜ್ಯೋತಿಷ್ಯವನ್ನೂ ಕೇಳಿಲ್ಲ, ಎಲ್ಲವನ್ನು ದೇವರ ಮೇಲೆ ಭಾರ ಹಾಕಿದ್ದೇವೆ. ಹಾಗಾಗಿ ನಾನು ಯಾವುದೇ ಆತಂಕಕ್ಕೆ ಒಳಗಾಗಿಲ್ಲ ಎಂದು ಹೇಳಿದರು.
ಪ್ರಶಾಂತ ಆನೆಯ ಬಗ್ಗೆ ಆತಂಕ!
ಅಂಬಾರಿ ಆನೆ ಪ್ರಶಾಂತನ ಕುರಿತು ಮಾತನಾಡುತ್ತಾ ರಾಜಮಾತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.ನನಗೆ ಈ ಬಾರಿ ಪ್ರಶಾಂತ ಆನೆಯ ಬಗ್ಗೆ ಕೊಂಚ ಆತಂಕವಿತ್ತು. ಯಾವ ರೀತಿಯಾಗಿ ಅಂಬಾರಿ ಕಟ್ಟಿಸಿಕೊಳ್ಳುತ್ತಾನೋ, ಹೇಗೆ ನಡೆಯುತ್ತಾನೋ ಎಂಬ ಚಿಂತೆ ಕಾಡಿತ್ತು. ಹಿಂದೆಂದೂ ನನಗೆ ಈ ರೀತಿ ಆತಂಕ ಇರಲಿಲ್ಲ.ಆದರೆ, ಎಲ್ಲಾ ಆತಂಕಗಳನ್ನು ಮೀರಿ ಪ್ರಶಾಂತ ಅತ್ಯಂತ ಚೆನ್ನಾಗಿ ಅಂಬಾರಿ ಹೊತ್ತಿದ್ದಾನೆ. ಇದು ನನಗೆ ಬಹಳ ಸಂತೋಷ ತಂದಿದೆ. ಚಾಮುಂಡಿ ತಾಯಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ ಎಂದು ನುಡಿದರು.
#MysuruDasara #PramodadeviWadiyar #JattiKalaga #MysuruNews #UdayakalaNews #ChamundiHills #DasaraElephant #KarnatakaNews


