Thursday, October 22, 2026
Menu

ಶಿವಮೊಗ್ಗ ದಸರಾ ಆನೆ ಅವಾಂತರ, ರಾಮಲಿಂಗಾ ರೆಡ್ಡಿ ಸ್ಪಷ್ಟನೆ: ಆನೆ ಬಳಕೆಗೆ ಹೊಸ ನಿಯಮ!

ಉದಯಕಾಲ ನ್ಯೂಸ್, ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತ ಆನೆ ‘ಸೋಮಣ್ಣ’ ದಿಢೀರ್ ನಿಯಂತ್ರಣ ತಪ್ಪಿ ಬೀದಿ ಬೀದಿಗಳಲ್ಲಿ ಓಡಿದ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ, ಜನಸಂದಣಿ ಹಾಗೂ ತೀವ್ರ ಶಬ್ದದ ಹಿನ್ನೆಲೆಯಲ್ಲಿ ಆನೆಗಳು ಈ ರೀತಿ ವಿಚಲಿತಗೊಂಡು ವರ್ತಿಸುವುದು ಸ್ವಾಭಾವಿಕ ಎಂದಿದ್ದಾರೆ. ಅಲ್ಲದೆ, ಧಾರ್ಮಿಕ ಉತ್ಸವಗಳಲ್ಲಿ ಆನೆಗಳ ಬಳಕೆ ಕುರಿತು ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸುವ ಸೂಚನೆ ನೀಡಿದ್ದಾರೆ.

ಪೇಚೆಗೆ ಸಿಕ್ಕ ಆನೆ!

ಅಕ್ಟೋಬರ್ 21ರಂದು ಶಿವಮೊಗ್ಗದಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಸಕ್ರೆಬೈಲು ಆನೆ ಶಿಬಿರದ ‘ಸೋಮಣ್ಣ’ ಆನೆ ಅಂಬಾರಿ ಹೊತ್ತು ಸಾಗುತ್ತಿದ್ದಾಗ ಹಠಾತ್ ನಿಯಂತ್ರಣ ತಪ್ಪಿ ಓಡಲು ಶುರು ಮಾಡಿತು. ಈ ವೇಳೆ ಒಂದು ಕಾರು ಹಾಗೂ ಕೆಲವು ದ್ವಿಚಕ್ರ ವಾಹನಗಳಿಗೆ ಹಾನಿಯಾಯಿತು. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ, ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಚಿವರ ಸ್ಪಷ್ಟನೆ ಮತ್ತು ನಟಿ ರಮ್ಯಾ ಆಕ್ರೋಶ!

ಘಟನೆ ಕುರಿತು ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಅಪಾರ ಜನಸಂದಣಿ, ಪಟಾಕಿ ಸದ್ದು ಹಾಗೂ ವಾದ್ಯಗಳ ಗದ್ದಲದಿಂದ ಆನೆಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತವೆ. ಇಂತಹ ಸಂದರ್ಭದಲ್ಲಿ ಆನೆಗಳು ಅನಿರೀಕ್ಷಿತವಾಗಿ ವರ್ತಿಸುವುದು ಸ್ವಾಭಾವಿಕ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಆನೆ ಸೋಮಣ್ಣನಿಗೆ ಗಾಯವಾಗಿತ್ತು, ಅದಕ್ಕೆ ಚಿಕಿತ್ಸೆ ನೀಡಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ನಟಿ ರಮ್ಯಾ, ಇಂತಹ ಮೆರವಣಿಗೆಗಳಲ್ಲಿ ಶಿಬಿರದ ಆನೆಗಳನ್ನು ಬಳಸಬಾರದು ಎಂದು ಸಚಿವರಿಗೆ ಟ್ಯಾಗ್ ಮಾಡಿ ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದರು.

ಆನೆಗಳ ಬಳಕೆಗೆ ಹೊಸ ನಿಯಮಗಳು

1. ಕಾರ್ಯಕ್ರಮದ ಆಯೋಜಕರು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಸಂಬಂಧಿಸಿದ ಪ್ರಾಧಿಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು.
2.ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳಿಗೆ ಕನಿಷ್ಠ 20 ದಿನಗಳ ಮುಂಚಿತವಾಗಿ ಪೂರ್ವ ತರಬೇತಿ (ತಾಲೀಮು) ನೀಡಬೇಕು.
3.ಆನೆಗಳು ಮಾನಸಿಕ ಹಾಗೂ ದೈಹಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸನ್ನದ್ಧವಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.
4. ತೀವ್ರ ಶಬ್ದಮಟ್ಟ ಹಾಗೂ ಜನಸಂದಣಿಗೆ ಆನೆಗಳು ಹೊಂದಿಕೊಳ್ಳಬಲ್ಲವೇ ಎಂಬುದನ್ನು ಪರಿಶೀಲಿಸಿದ ನಂತರವೇ ಅನುಮತಿ ನೀಡಬೇಕು.
5 ಸಾರ್ವಜನಿಕರ ಮತ್ತು ಆನೆಗಳ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೆ ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಒಟ್ಟಿನಲ್ಲಿ ಹಬ್ಬ ಉತ್ಸವಗಳ ಹೆಸರಿನಲ್ಲಿ ಮೂಕ ಪ್ರಾಣಿಗಳ ಹಿಂಸೆ ಅನಾದಿ ಕಾಲದಿಂದಲೂ ನಡೆಯುತ್ತಿರುವುದು ವಿಪರ್ಯಾಸವೇ ಸರಿ.
#ShivamoggaDasara #SomannaElephant #RamalingaReddy #ElephantProcession #SakrebyleCamp #UdayakalaNews #KarnatakaNews #Dasara2026 #WildlifeSafety

Related Posts

Leave a Reply

Your email address will not be published. Required fields are marked *