Menu

ಜಟ್ಟಿ ಕಾಳಗ ನಿಂತಿದ್ದು ಇದೇ ಮೊದಲಲ್ಲ: ಪೊಲೀಸ್‌ ವಿರುದ್ಧ ಪ್ರಮೋದಾದೇವಿ ಅಸಮಾಧಾನ!

ಉದಯಕಾಲ ನ್ಯೂಸ್, ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಪೊಲೀಸ್ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ಅಧಿಕಾರಿಗಳ ವರ್ತನೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ತೀವ್ರ ನಿರಾಶೆ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದೀರ್ಘ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದಸರಾ ಆಚರಣೆಯ ವ್ಯವಸ್ಥೆ ಹಾಗೂ ಎದುರಾದ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಬೇಸರ ಹೊರಹಾಕಿದ್ದಾರೆ.

ಅಸಮಾಧಾನ ಹಾಗೂ ಆಕ್ಷೇಪಣೆಗಳು

ಜಟ್ಟಿ ಕಾಳಗ ರದ್ದು ಹೊಸದಲ್ಲ

ಇತಿಹಾಸದಲ್ಲೇ ಮೊದಲ ಬಾರಿಗೆ ‘ವಜ್ರಮುಷ್ಟಿ ಕಾಳಗ’ವನ್ನು ನಿಲ್ಲಿಸಲಾಗಿದೆ ಎಂಬ ಮಾಧ್ಯಮಗಳ ವರದಿ ಸುಳ್ಳು. ಹಿಂದೆ 1970 ಮತ್ತು 1980ರ ದಶಕಗಳಲ್ಲಿ ಹಾಗೂ 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಜಟ್ಟಿ ಕಾಳಗವನ್ನು ನಡೆಸಿರಲಿಲ್ಲ. ಆದ್ದರಿಂದ ಇದು ಪ್ರಥಮ ಬಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಸಮನ್ವಯ ಕೊರತೆ

ಅರಮನೆ ಪೊಲೀಸ್, ಮೈಸೂರು ಜಿಲ್ಲಾ ಪೊಲೀಸ್ ಹಾಗೂ ಮೀಸಲು ಪಡೆಗಳ ನಡುವೆ ಪರಿಣಾಮಕಾರಿ ಸಂವಹನ ಮತ್ತು ಸಮನ್ವಯದ ಕೊರತೆ ಪ್ರತಿವರ್ಷ ಎದ್ದು ಕಾಣುತ್ತಿದೆ. ಅಂಬಾರಿ ಬಳಿ ಭದ್ರತಾ ನಿಯಮ ಉಲ್ಲಂಘಿಸಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸೆಲ್ಫಿ ಮತ್ತು ಫೋಟೋ ತೆಗೆಸಿಕೊಳ್ಳಲು ಮುಗಿಬೀಳುವುದು ಅವರ ಶಿಸ್ತಿನ ಕೊರತೆಯನ್ನು ತೋರಿಸುತ್ತದೆ ಎಂದಿದ್ದಾರೆ.

ಅಧಿಕೃತ ಪ್ರತಿನಿಧಿಗಳೊಂದಿಗೆ ದುರ್ವರ್ತನೆ

ಅಂಬಾರಿಯನ್ನು ಸುರಕ್ಷಿತವಾಗಿ ಮರಳಿ ಪಡೆಯಲು ತೆರಳಿದ್ದ, ಅಧಿಕೃತ ‘ಡ್ಯೂಟಿ ಪಾಸ್’ ಹೊಂದಿರುವ ನಮ್ಮ ಪ್ರತಿನಿಧಿಗಳೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿ ತಳ್ಳಾಡಿದ್ದಾರೆ. ಅಂಬಾರಿ ಎಂಬುದು ಖಾಸಗಿ ಆಸ್ತಿಯೇ ಹೊರತು ಸರ್ಕಾರದ್ದಲ್ಲ ಎಂಬುದು ಅವರಿಗೆ ತಿಳಿದಿರಬೇಕು ಎಂದು ಕಿಡಿಕಾರಿದ್ದಾರೆ. ಅಲ್ಲದೆ, ರಾಜಕುಟುಂಬದ ಖಾಸಗಿ ಪಾರ್ಕಿಂಗ್ ಸ್ಥಳವನ್ನು ಪೊಲೀಸರು ತಮ್ಮ ವಾಹನಗಳನ್ನು ನಿಲ್ಲಿಸುವ ಮೂಲಕ ಅತಿಕ್ರಮಿಸಿದ್ದಾರೆ ಎಂದು ದೂರಿದ್ದಾರೆ.
ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಹೊರುವ ಆನೆಯ ಕುರಿತು ನಮ್ಮಿಂದ ಮಾಹಿತಿ ಮುಚ್ಚಿಡಲಾಗಿತ್ತು. ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಇರುವಾಗ ನಾವೇ ಖುದ್ದಾಗಿ ಡಿಸಿಎಫ್ ಬಳಿ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಮಾತೆಯ ಪ್ರಮುಖ ಸಲಹೆಗಳು

ಸರ್ಕಾರಿ ದಸರಾಕ್ಕೆ ಯಾವುದೇ ಧಾರ್ಮಿಕ ಮಹತ್ವವಿಲ್ಲ, ಆದರೆ ನಮ್ಮ ನವರಾತ್ರಿ ಆಚರಣೆಯು ಧಾರ್ಮಿಕ ವಿಧಿವಿಧಾನಗಳ ಪ್ರಮುಖ ಭಾಗವಾಗಿದೆ. ಇಲಾಖೆಗಳ ಸಮನ್ವಯದ ಕೊರತೆಯಿಂದ ನಮ್ಮ ಆಚರಣೆಗಳಿಗೆ ಅಡ್ಡಿಯಾಗುತ್ತಿರುವುದರಿಂದ, ರಾಜಮಾತೆಯು ಕೆಲವು ಸಲಹೆಗಳನ್ನು ಮುಂದಿಟ್ಟಿದ್ದಾರೆ. ಮೊದಲ ದಿನದಿಂದ 7ನೇ ದಿನದವರೆಗೆ ಸರ್ಕಾರವು ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದು.

ಆಯುಧ ಪೂಜೆ ಮತ್ತು ವಿಜಯದಶಮಿಯ ದಿನದಂದು ಅರಮನೆ ಆವರಣವನ್ನು ಮುಕ್ತವಾಗಿಡಬೇಕು. ಇದರಿಂದ ರಾಜ ಕುಟುಂಬವು ಯಾವುದೇ ಹೊರಗಿನ ಹಸ್ತಕ್ಷೇಪವಿಲ್ಲದೆ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಸಾಧ್ಯವಾಗುತ್ತದೆ. ಬೆಟ್ಟದಲ್ಲಿ ನಡೆಯುವ ರಥೋತ್ಸವದ ದಿನದಂದೇ ಸರ್ಕಾರವು ಶ್ರೀ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಮೆರವಣಿಗೆಯನ್ನು ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಸಬಹುದು.ಸರ್ಕಾರ ಹಾಗೂ ಅಧಿಕಾರಿಗಳು ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಮೋದಾದೇವಿ ಒಡೆಯರ್ ಆಗ್ರಹಿಸಿದ್ದಾರೆ.
#PramodadeviWadiyar #MysuruDasara #VajramushtiKalaga #MysuruPolice #UdaykalaNews #KarnatakaNews #Dasara2026 #RoyalFamilyMysuru

Related Posts

Leave a Reply

Your email address will not be published. Required fields are marked *