Menu

ಬ್ರೆಜಿಲ್ ಅಧ್ಯಕ್ಷರಾಗಿ 4ನೇ ಬಾರಿಗೆ ಆಯ್ಕೆಯಾದ ಟ್ರಂಪ್ ವಿರೋಧಿ ಲುಯಿಜ್ ಇನಾಸಿಯೊ ಲುಲಾ ಡ ಸಿಲ್ವಾ

ಬ್ರೆಸಿಲಿಯಾ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ ಮರು ಮತದಾನದ ಫಲಿತಾಂಶ ಹೊರಬಂದಿದ್ದು, ಎಡಪಂಥೀಯ ದಿಗ್ಗಜ ನಾಯಕ ಲುಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ಅಧ್ಯಕ್ಷರಾಗಿ ಐತಿಹಾಸಿಕ ಮರುಆಯ್ಕೆ ಕಂಡಿದ್ದಾರೆ. ಈ ಮೂಲಕ ಲ್ಯಾಟಿನ್ ಅಮೆರಿಕದಲ್ಲಿ ಬಲಪಂಥೀಯ ರಾಜಕೀಯ ಪ್ರಾಬಲ್ಯಕ್ಕೆ ತಡೆಹಾಕುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಅಧಿಕೃತ ಅಂತಿಮ ಫಲಿತಾಂಶಗಳ ಪ್ರಕಾರ, 80 ವರ್ಷ ವಯಸ್ಸಿನ ಲುಲಾ ಅವರು ಶೇ. 51.79ರಷ್ಟು (6 ಕೋಟಿಗೂ ಅಧಿಕ) ಮತಗಳನ್ನು ಪಡೆದು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಬಲಪಂಥೀಯ ಅಭ್ಯರ್ಥಿ, ಸೆನೆಟರ್ ಫ್ಲಾವಿಯೊ ಬೋಲ್ಸನಾರೊ ಅವರು ಶೇ. 48.21ರಷ್ಟು ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಪುಟಿದೆದ್ದು ಬಂದ ಲುಲಾ ಡ ಸಿಲ್ವಾ!

ಅಕ್ಟೋಬರ್ ಆರಂಭದಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಫ್ಲಾವಿಯೊ ಬೋಲ್ಸನಾರೊ ಮುನ್ನಡೆ ಸಾಧಿಸಿದ್ದರು. ಆದರೆ, ದ್ವಿತೀಯ ಸುತ್ತಿನ ಮತದಾನದಲ್ಲಿ ಅದ್ಭುತ ಚೇತರಿಕೆ ಕಾಣುವ ಮೂಲಕ ಲುಲಾ ವಿರೋಧಿ ಅಲೆಯನ್ನು ಮೆಟ್ಟಿನಿಂತು ಜಯಗಳಿಸಿದ್ದಾರೆ. ಬ್ರೆಜಿಲ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾದ ಬಳಿಕ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿ, ದ್ವಿತೀಯ ಸುತ್ತಿನಲ್ಲಿ ಗೆದ್ದ ಮೊದಲ ನಾಯಕ ಎಂಬ ಇತಿಹಾಸವನ್ನು ಲುಲಾ ಬರೆದಿದ್ದಾರೆ.
ಚುನಾವಣಾ ದಿನದಂದು ಕೆಲವು ಕಡೆ ಬಸ್ ಸೌಲಭ್ಯ ಕಡಿತ ಹಾಗೂ ಭಾರಿ ಮಳೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಮತದಾನದ ಸಮಯವನ್ನು ಎರಡು ಗಂಟೆಗಳ ಕಾಲ ವಿಸ್ತರಿಸಿತ್ತು. ಆದರೂ ಕೆಲವು ಕಡೆ ಎಲೆಕ್ಟ್ರಾನಿಕ್ ಮತಯಂತ್ರಗಳು ನಿಷ್ಕ್ರಿಯಗೊಂಡಿದ್ದು ಸಣ್ಣಪುಟ್ಟ ಗೊಂದಲಗಳಿಗೆ ಕಾರಣವಾಯಿತು.

ಪ್ರಬಲ ಎದುರಾಳಿ ಪರಾಜಯ

ಪರಾಜಿತ ಅಭ್ಯರ್ಥಿ ಫ್ಲಾವಿಯೊ ಬೋಲ್ಸನಾರೊ ಅವರು ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಪುತ್ರರಾಗಿದ್ದಾರೆ. ಜೈರ್ ಬೋಲ್ಸನಾರೊ ಪ್ರಸ್ತುತ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ತಾವು ಗೆದ್ದರೆ ತಂದೆಗೆ ಕ್ಷಮಾದಾನ ನೀಡುವುದಾಗಿ ಫ್ಲಾವಿಯೊ ಭರವಸೆ ನೀಡಿದ್ದರು. ಆದರೆ ದೇಶದ ಜನತೆ ಬದಲಾವಣೆಗಿಂತ ಪರಿಚಿತ ಹಾಗೂ ವಿಶ್ವಾಸಾರ್ಹ ನಾಯಕತ್ವಕ್ಕೆ ಮಣೆ ಹಾಕಿದ್ದಾರೆ.
ಈ ಹಿಂದೆ 2003ರಿಂದ 2010ರವರೆಗೆ ಎರಡು ಅವಧಿಗೆ ಮತ್ತು 2023ರಿಂದ ಪ್ರಸ್ತುತ ಅವಧಿಯವರೆಗೆ ಸೇವೆ ಸಲ್ಲಿಸಿರುವ ಲುಲಾ, ಈ ಹೊಸ ಗೆಲುವಿನೊಂದಿಗೆ ಒಟ್ಟು ನಾಲ್ಕನೇ ಬಾರಿಗೆ ಬ್ರೆಜಿಲ್ ಚುಕ್ಕಾಣಿ ಹಿಡಿಯಲಿದ್ದಾರೆ. ಅವರು ಜನವರಿ 5, 2027ರಂದು ಅಧಿಕೃತವಾಗಿ ತಮ್ಮ ಹೊಸ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಂತಾರಾಷ್ಟ್ರೀಯ ರಾಜಕೀಯದ ಮೇಲೆ ಪ್ರಭಾವ

ವಿಶ್ವದ ಗಮನಸೆಳೆದಿದ್ದ ಈ ಚುನಾವಣೆಯು ಜಾಗತಿಕ ರಾಜಕಾರಣದ ಮೇಲೂ ಭಾರಿ ಪರಿಣಾಮ ಬೀರಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿತ ಬಲಪಂಥೀಯ ಒಲವಿನ ನಾಯಕರಿಗೆ ಈ ಫಲಿತಾಂಶ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಈ ಗೆಲುವಿನ ಬಳಿಕ ಮಾತನಾಡಿದ ಅಧ್ಯಕ್ಷ ಲುಲಾ,ಈ ದೇಶವು ಯಾರ ವಸಾಹತುವೂ ಆಗಲು ಒಪ್ಪುವುದಿಲ್ಲ, ಪ್ರಜಾಪ್ರಭುತ್ವ ಮತ್ತು ದೇಶದ ಸಾರ್ವಭೌಮತೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲಎಂದು ಗುಡುಗಿದ್ದಾರೆ.
#BrazilElection2026 #LulaDaSilva #FlavioBolsonaro #BrazilPresident #LatinAmericaPolitics #UdaykalaNews #InternationalNews #DonaldTrump #JairBolsonaro #GlobalPolitics

Related Posts

Leave a Reply

Your email address will not be published. Required fields are marked *