ಉದಯಕಾಲ ನ್ಯೂಸ್, ಚಿಕ್ಕಬಳ್ಳಾಪುರ: ಮದುವೆಯಾಗಿ ಕೆಲವೇ ತಿಂಗಳು ಕಳೆದಿತ್ತು, ನೂರಾರು ಕನಸುಗಳೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದ ನವದಂಪತಿಯ ಬದುಕಿಗೆ ಭೀಕರ ರಸ್ತೆ ಅಪಘಾತವೊಂದು ದುರಂತ ಅಂತ್ಯ ಹಾಡಿದೆ. ಇಕೋ ಕಾರು ಹಾಗೂ ಎಲೆಕ್ಟ್ರಿಕ್ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನವದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ – ಬೆಂಗಳೂರು ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ಚಿಂತಾಮಣಿ ನಗರದ ಎಂ.ಜಿ. ರಸ್ತೆಯ ಶ್ರೀನಿವಾಸ್ ಜ್ಯುವೆಲ್ಸ್ ಬಳಿಯ ನಿವಾಸಿಗಳಾದ ಷಣ್ಮುಖ (27) ಹಾಗೂ ಅವರ ಪತ್ನಿ ಮಿಥುಲಾ (24)ಎಂದು ಗುರುತಿಸಲಾಗಿದೆ. ಕೆಲವೇ ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ರಸ್ತೆ ಅಪಘಾತದಲ್ಲಿ ಅಸುನೀಗಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕ ಮಡುಗಟ್ಟುವಂತೆ ಮಾಡಿದೆ.
ಘಟನೆಯ ವಿವರ
ಚಿಂತಾಮಣಿ – ಬೆಂಗಳೂರು ಮುಖ್ಯ ರಸ್ತೆದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ನವದಂಪತಿ ಎಲೆಕ್ಟ್ರಿಕ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಇಕೋ ಕಾರು ಹಾಗೂ ಬೈಕ್ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಬೈಕ್ ಎರಡೂ ತೀವ್ರವಾಗಿ ಜಖಂಗೊಂಡು ನಜ್ಜುಗುಜ್ಜಾಗಿವೆ.ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಷಣ್ಮುಖ ಹಾಗೂ ಮಿಥುಲಾ ಅವರು ಚಿಕಿತ್ಸೆ ಪಡೆಯಲು ಕೂಡ ಅವಕಾಶವಿಲ್ಲದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
#Chikkaballapura #Chintamani #RoadAccident #NewlywedCouple #UdaykalaNews #KarnatakaCrime #FatalAccident #AccidentNews


