ಉದಯಕಾಲ ನ್ಯೂಸ್, ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ನಟ ಧನ್ವೀರ್ ಗೌಡ ಅವರ ವೈರಲ್ ಆಡಿಯೋ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಹಾಗೂ ನಟ ಝೈದ್ ಖಾನ್ ಅವರು ಧನ್ವೀರ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ಅಧಿಕೃತವಾಗಿ ದೂರು ನೀಡಲು ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿರುವ ಆಡಿಯೋವೊಂದರಲ್ಲಿ ನಟ ಧನ್ವೀರ್ ಅವರು ನಟ ಝೈದ್ ಖಾನ್ ಹಾಗೂ ನಿರ್ದೇಶಕ ದಿನಕರ್ ತೂಗುದೀಪ್ ಸೇರಿದಂತೆ ಇತರೆ ಗಣ್ಯರ ಕುರಿತು ಅತ್ಯಂತ ಹಗುರವಾದ, ಅವಹೇಳನಕಾರಿ ಹಾಗೂ ಕೆಳಮಟ್ಟದ ಭಾಷೆ ಬಳಸಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕು ಭಾರಿ ಕೋಲಾಹಲ ಉಂಟುಮಾಡಿದೆ. ವಿಶೇಷವಾಗಿ “ಝೈದ್ ಖಾನ್ ನನ್ನ ಕಾಲಿನ ಧೂಳಿಗೂ ಸಮನಲ್ಲ” ಎಂಬರ್ಥದಲ್ಲಿ ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಅಂಶಗಳು ಯುವ ನಟರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ.
ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ವಿವಿಧ ವಿವಾದಗಳ ಹಿನ್ನೆಲೆಯಲ್ಲಿ ಹೊರಬಂದಿದೆ ಎನ್ನಲಾದ ಈ ಆಡಿಯೋದಲ್ಲಿ ವೈಯಕ್ತಿಕ ನಿಂದನೆಗಳು ಹಾಗೂ ಆಕ್ಷೇಪಾರ್ಹ ಪದ ಬಳಕೆ ಇರುವುದು ಚಿತ್ರರಂಗದ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡಿರುವ ಝೈದ್ ಖಾನ್, ಧನ್ವೀರ್ ಅವರ ಈ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂದು ಮಧ್ಯಾಹ್ನ ಗಾಂಧಿನಗರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್ಸಿಸಿ) ತೆರಳಿ ದೂರು ದಾಖಲಿಸಲಿದ್ದಾರೆ.
ಕನ್ನಡ ಚಿತ್ರರಂಗದ ಇಬ್ಬರು ಯುವ ನಟರ ನಡುವಿನ ಈ ತಿಕ್ಕಾಟ ಈಗ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳ ತಲುಪಿದ್ದು, ಈ ಕುರಿತು ಮಂಡಳಿಯ ಹಿರಿಯರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಮತ್ತು ಧನ್ವೀರ್ ಈ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
#DhanveerGowda #ZaidKhan #SandalwoodControversy #KFCC #KannadaCinema #UdaykalaNews #ViralAudio #DinakarThoogudeepa #BangaloreNews #KarnatakaFilmChamber


