Menu

ಮಡಿಕೇರಿಯಲ್ಲಿ ಲಾರಿ ಡಿಕ್ಕಿ ಹೊಡೆದು ಟ್ಯಾಕ್ಸಿ ಚಾಲಕ ಸಾವು

ಮಡಿಕೇರಿ ನಗರದ ತಿಮ್ಮಯ್ಯ ಸರ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ  ನಡೆದಿದೆ. ಮೃತರನ್ನು ಗಣಪತಿ ಬೀದಿ ನಿವಾಸಿ ಸಾಹಿಲ್ (24) ಎಂದು ಗುರುತಿಸಲಾಗಿದೆ.

ಮಂಗಳೂರು ರಸ್ತೆಯಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ತಿಮ್ಮಯ್ಯ ಸರ್ಕಲ್ ಬಳಿಯ ನೂತನ ಪ್ರಯಾಣಿಕರ ತಂಗುದಾಣದ ಮುಂದೆ ರಸ್ತೆ ಬದಿ ನಿಂತಿದ್ದ ಸಾಹಿಲ್ ಗೆ ಡಿಕ್ಕಿ ಹೊಡೆದಿದೆ. ಮಂಜು ಕವಿದ ಹಿನ್ನೆಲೆಯಲ್ಲಿ ಚಾಲಕನಿಗೆ ರಸ್ತೆ ಬದಿ ನಿಂತಿದ್ದ ವ್ಯಕ್ತಿ ಕಾಣಿಸದೆ ಅಪಘಾತ ಸಂಭವಿಸಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಸಾಹಿಲ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಮೈಸೂರಿನಲ್ಲಿ ಹೆಂಡತಿಯ ಕೊಲೆಗೆ ಯತ್ನಿಸಿದ ಗಂಡ
ಮೈಸೂರಿನ ಹುಣಸೂರು ನಗರದ ರಜಾಕ್‌ ಮೊಹಲ್ಲಾದಲ್ಲಿ ಸಮಿವುಲ್ಲ ಎಂಬಾತ ಪತ್ನಿ ಸಮೀನಾ ಎಂಬಾಕೆಗೆ ಲಾಂಗ್‌ನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾನೆ.

20 ವರ್ಷಗಳ ಹಿಂದೆ ಇವರಿಗೆ ಮದುವೆಯಾಗಿತ್ತು. ಸಮಿವುಲ್ಲಾ ಪತ್ನಿಯ ಮೇಲೆ ಅನುಮಾನ ಹೊಂದಿದ್ದ, ಆತನ ಕಿರುಕುಳ ತಾಳಲಾರದೆ ಸಮೀನಾ ಈ ಹಿಂದೆ ತವರು ಮನೆಗೆ ಹೋಗಿದ್ದು, ಸಂಧಾನ ನಡೆಸಿ ಪತಿ ಅವಳನ್ನು ಮತ್ತೆ ಮನೆಗೆ ಕರೆತಂದಿದ್ದ ಎಂದು ಹೇಳಲಾಗಿದೆ.

ಎಲ್ಲರೂ ಮಲಗಿದ್ದಾಗ ಸಮಿವುಲ್ಲಾ ಮುಂಬಾಗಿಲು ಚಿಲಕ ಹಾಕಿ ಪತ್ನಿಯ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿದ್ದಾನೆ. ತಾಯಿಯ ಕೂಗಾಟ ಕೇಳಿ ರಕ್ಷಣೆಗೆ ಬಂದ 10 ವರ್ಷದ ಮಗ ಅಬ್ನಾನ್ ಶರೀಫ್ ಮತ್ತು ಮಗಳ ಮೇಲೆಯೂ ಲಾಂಗ್ ಬೀಸಿದ್ದಾನೆ. ಸಮೀನಾಗೆ ಗಂಭೀರ ಗಾಯಗಳಾಗಿದ್ದು, ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೊಬ್ಬೆ ಕೇಳಿ ಮನೆಗೆ ಬರುವಷ್ಟರಲ್ಲೇ ಸಮಿವುಲ್ಲ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾನೆ. ಸಮೀನಾಬಾನು ಮತ್ತು ಮಕ್ಕಳನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related Posts

Leave a Reply

Your email address will not be published. Required fields are marked *