ಉದಯಕಾಲ ನ್ಯೂಸ್, ಗದಗ: ದೇವರ ಕೋಣೆ ಇರುವುದು ಪೂಜಿಸಲು ಆದರೆ, ಪೂಜೆ-ಪುನಸ್ಕಾರಗಳನ್ನು ಮಾಡುವ ಪವಿತ್ರವಾದ ದೇವರ ಕೋಣೆಯಲ್ಲೇ ಕೆಜಿಗಟ್ಟಲೆ ಗಾಂಜಾ ಅಡಗಿಸಿಟ್ಟುಕೊಂಡು ದಂಧೆ ನಡೆಸುತ್ತಿದ್ದ ಯುವಕನನ್ನು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಸವರಾಜ ಹರಣಶಿಕಾರಿ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಮನೆಯಲ್ಲೇ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಯುವಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ.
ಸಿಕ್ತು ಬೃಹತ್ ಗಾಂಜಾ ಸರಂಜಾಮು
ಆರೋಪಿಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದಾಗ, ದೇವರ ಕೋಣೆಯಲ್ಲಿಯೇ ಗೋಣಿಚೀಲ ಹಾಗೂ ಬ್ಯಾಗ್‌ಗಳಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ 2 ಕೆಜಿ 91 ಗ್ರಾಂ ಗಾಂಜಾ ಪತ್ತೆಯಾಗಿದೆ. ಪೂಜೆ ಮಾಡುವ ಸ್ಥಳದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಶೇಖರಿಸಿಟ್ಟಿರುವುದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ವಶಪಡಿಸಿಕೊಳ್ಳಲಾದ ಗಾಂಜಾದ ಮೌಲ್ಯ ಅಂದಾಜು 1 ಲಕ್ಷ 4,550 ರೂ. ಎಂದು ಅಂದಾಜಿಸಲಾಗಿದೆ.
ದಂಧೆಯ ಹಿಂದೆ ಮಹಾರಾಷ್ಟ್ರ ನಂಟು!
ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ, ಆರೋಪಿಯು ಗಾಂಜಾವನ್ನು ರಾಜ್ಯದ ಹೊರಗಿನಿಂದ ಅಂದರೆ ಮಹಾರಾಷ್ಟ್ರದಿಂದ ಕಡಿಮೆ ಬೆಲೆಗೆ ತಂದು ಇಲ್ಲಿನ ಸ್ಥಳೀಯ ಗ್ರಾಹಕರಿಗೆ ಹಾಗೂ ಯುವಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬುದು ಬಯಲಾಗಿದೆ. ಈ ಅಕ್ರಮ ಗಾಂಜಾ ಜಾಲದ ಹಿಂದೆ ಬೇರೆ ಯಾರ್ಯಾರ ಕೈವಾಡವಿದೆ ಎಂಬುದರ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
#GadagNews #Naregal #Gajendragad #CannabisSeized #DrugPeddlerArrested #MaharashtraGanjaNetwork #CrimeNews #UdayakalaNews #BreakingNews


