Menu

ಕಪ್ಪು ಸಮುದ್ರದಲ್ಲಿ ರಷ್ಯಾ ಡ್ರೋನ್ ದಾಳಿ : ಇಬ್ಬರ ಸಾವು, ಮೂವರು ಭಾರತೀಯರಿಗೆ ಗಾಯ

ಮಾಸ್ಕೋ/ನವದೆಹಲಿ: ಕಪ್ಪು ಸಮುದ್ರದಲ್ಲಿ ಟರ್ಕಿ ಒಡೆತನದ ವಾಣಿಜ್ಯ ನೌಕೆಯೊಂದರ ಮೇಲೆ ರಷ್ಯಾ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಡಗಿನಲ್ಲಿದ್ದ ಮೂವರು ಭಾರತೀಯರು ಸೇರಿದಂತೆ ಹಲವರು ಗಾಯಗೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಟರ್ಕಿ ಒಡೆತನದ ಹಾಗೂ ಸೆಂಟ್ ಕಿಟ್ಸ್ ಮತ್ತು ನೆವಿಸ್ ಧ್ವಜದೊಂದಿಗೆ ಸಂಚರಿಸುತ್ತಿದ್ದ ‘ಎಂವಿ ರೊಯಾದ್ ಮಮ್ಮದೋವ್’ (MV Royad Mammadov) ವಾಣಿಜ್ಯ ನೌಕೆಯು ಉಕ್ರೇನ್‌ನ ಇಜ್ಮಾಯಿಲ್ ಬಂದರಿನಿಂದ ಇಟಲಿಯ ರವೆನ್ನಾಗೆ ಗೋಧಿ ಹಾಗೂ ಸರಕುಗಳನ್ನು ಹೊತ್ತುಕೊಂಡು ಕಪ್ಪು ಸಮುದ್ರದ ತಟಸ್ಥ ಜಲಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ ಈ ದಾಳಿ ನಡೆದಿದೆ.

ಭಾರತೀಯ ರಾಯಭಾರ ಕಚೇರಿಯಿಂದ ಸ್ಪಷ್ಟನೆ

ಗಾಯಗೊಂಡ ಸಿಬ್ಬಂದಿ ವರ್ಗದಲ್ಲಿ ಮೂವರು ಭಾರತೀಯ ಪ್ರಜೆಗಳೂ ಇದ್ದು, ರೋಮೇನಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರೊಮೇನಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎಕ್ಸ್ (Twitter) ಜಾಲತಾಣದ ಮೂಲಕ ಅಧಿಕೃತ ಮಾಹಿತಿ ನೀಡಿದೆ.ಘಟನೆಯ ಬಳಿಕ ರೊಮೇನಿಯಾದಲ್ಲಿರುವ ಭಾರತದ ರಾಯಭಾರಿ ಮನೋಜ್ ಮಹಾಪಾತ್ರ ಅವರು ಗಾಯಗೊಂಡ ಭಾರತೀಯ ಪ್ರಜೆಗಳೊಂದಿಗೆ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯರೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಮೂವರು ಭಾರತೀಯರು ಸುರಕ್ಷಿತವಾಗಿದ್ದು, ಒಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಭಾರತೀಯ ಸಿಬ್ಬಂದಿಗೆ ಅಗತ್ಯವಿರುವ ಎಲ್ಲ ರೀತಿಯ ರಾಜತಾಂತ್ರಿಕ ಹಾಗೂ ವೈದ್ಯಕೀಯ ನೆರವನ್ನು ಒದಗಿಸಲಾಗುತ್ತಿದೆ ಎಂದು ರಾಯಭಾರ ಕಚೇರಿ ಭರವಸೆ ನೀಡಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡನೆ

ಈ ಭೀಕರ ದಾಳಿಯ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾಗರಿಕ ನೌಕೆಯ ಮೇಲೆ ಎರಡು ರಷ್ಯನ್ ಡ್ರೋನ್‌ಗಳು ಅಪ್ಪಳಿಸಿವೆ ಎಂದು ತಿಳಿಸಿದ್ದಾರೆ. ಹಡಗಿನಲ್ಲಿದ್ದ ಅಜರ್‌‌ಬೈಜಾನ್ ಮತ್ತು ಭಾರತದ ನಾಗರಿಕರಲ್ಲಿ, ದುರದೃಷ್ಟವಶಾತ್ ಹಡಗಿನ ಕ್ಯಾಪ್ಟನ್ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಒಟ್ಟು 11 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಜಾಗತಿಕ ಆಹಾರ ಭದ್ರತೆ ಮತ್ತು ಸಮುದ್ರಯಾನದ ಸುರಕ್ಷತೆಗಾಗಿ ಅಂತರರಾಷ್ಟ್ರೀಯ ಸಮುದಾಯವು ತುರ್ತಾಗಿ ಒತ್ತಡ ಹೇರಬೇಕೆಂದು ಅವರು ಕರೆ ನೀಡಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ಕಪ್ಪು ಸಮುದ್ರದಲ್ಲಿ ವಾಣಿಜ್ಯ ನೌಕೆಗಳು ಹಾಗೂ ಬಂದರು ಮೂಲಸೌಕರ್ಯಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿರುವುದು ಜಾಗತಿಕ ವ್ಯಾಪಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೇವಲ ಒಂದೆಡೆ ದಿನದ ಹಿಂದಷ್ಟೇ ಉಕ್ರೇನ್‌ನ ಸುಮಿ ಪ್ರದೇಶದಲ್ಲಿ ಭಾರತೀಯ ಮಾಲೀಕತ್ವದ ಔಷಧೀಯ ಗೋದಾಮಿನ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಮೂಲದ ಉದ್ಯೋಗಿಯೊಬ್ಬರು ಮೃತಪಟ್ಟಿದ್ದರು ಎಂಬುದು ಇಲ್ಲಿ ಗಮನಾರ್ಹ.
#BlackSea #RussiaUkraineWar #DroneAttack #IndianNationals #MVRoyadMammadov #RomanianEmbassy #Zelenskyy #UdayakalaNews #BreakingNews #WorldNews

Related Posts

Leave a Reply

Your email address will not be published. Required fields are marked *