ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ವ್ಯಕ್ತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ನ್ಯೂ ಮಾರುತಿ ಬಡಾವಣೆಯ ಮನೆಯಲ್ಲಿ ಹರೀಶ್(42) ಎಂಬ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ಬರೆದಿಟ್ಟು ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಬಾಲಕಿ ಸಾವು
ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯಗಳಿಲ್ಲದೆ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಅಸ್ವಸ್ಥಗೊಂಡ ಎಂಟು ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಚಿಕಿತ್ಸೆ ಸಿಗದೆ ಅಸು ನೀಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು. ಆಕ್ಸಿಜನ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಇದು ಸಂಸದ ಡಾ.ಕೆ ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ತವರು ಗ್ರಾಮ ಎಂಬುದು ಗಮನಾರ್ಹ.
ಪೆರೇಸಂದ್ರ ಗ್ರಾಮದ ಚಂದ್ರಿಕಾ ಮತ್ತು ನವೀನ್ ದಂಪತಿಯ ಮಗಳು ಶಶಿಕಲಾ ಮನೆ ಮೇಲೆ ಕೋತಿ ಬಂದಿದೆ ಎಂದು ಭಯದಿಂದ ಮನೆಗೆ ಓಡಿ ಬಂದಿದ್ದಾಳೆ. ಏಕಾಏಕಿ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ಕುಟುಂಬಸ್ಥರು ಪೆರೇಸಂದ್ರ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಭಾನುವಾರವಾದ ಕಾರಣ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ, ಅಗತ್ಯ ವೈದ್ಯಕೀಯ ಉಪಕರಣಗಳೂ ಇರಲಿಲ್ಲ. ಕರ್ತವ್ಯದಲ್ಲಿದ್ದ ನರ್ಸ್ ಚಿಕಿತ್ಸೆ ನೀಡಲು ಸಾಧ್ಯವಾಗದೆ ಬಾಲಕಿ ಮೃತಪಟ್ಟಿದ್ದಾಳೆ.


