Menu

ಟಿಬೆಟ್‌ನಲ್ಲಿ ಭೀಕರ ಭೂಕಂಪ: 16 ಸಾವು, 32 ಜನರಿಗೆ ಗಾಯ; ಪ್ರವಾಹದ ಬೆನ್ನಲ್ಲೇ ಮತ್ತೊಂದು ದುರಂತ!

ಉದಯಕಾಲ ನ್ಯೂಸ್, ಹೈದರಾಬಾದ್/ಲಾಸಾ: ಇತ್ತೀಚೆಗಷ್ಟೇ ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದ ಚೀನಾದ ಟಿಬೆಟ್ ಪ್ರದೇಶದಲ್ಲಿ ಗುರುವಾರ ಸಂಜೆ ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 32ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಟಿಬೆಟ್‌ನ ಉತ್ತರ ಭಾಗದ ಪ್ರಮುಖ ನಗರವಾದ ನಾಗ್ಕುನಲ್ಲಿ ನೂರಾರು ಮನೆಗಳು ಧರೆಗುರುಳಿವೆ ಎಂದು ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ತಿಂಗಳು ಸಂಭವಿಸಿದ ಪ್ರವಾಹದ ಅನಾಹುತಗಳಿಂದ ಚೇತರಿಸಿಕೊಳ್ಳುವ ಮುನ್ನವೇ ಇಲ್ಲಿ ಸಂಭವಿಸಿರುವ ಈ ಪ್ರಬಲ ಭೂಕಂಪವು ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಭೀತಿಯನ್ನು ಸೃಷ್ಟಿಸಿದೆ.

ಭೂಕಂಪದ ತಾಂತ್ರಿಕ ವಿವರಗಳು

ರಿಕ್ಟರ್ ಮಾಪಕದಲ್ಲಿ 7.0 ರಷ್ಟು ಪ್ರಬಲ ತೀವ್ರತೆ ದಾಖಲಾಗಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 173 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದ್ದು, ಇದರ ಕೇಂದ್ರಬಿಂದು ಟಿಬೆಟ್‌ನ ರಾಜಧಾನಿ ಲಾಸಾದಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ. ಈ ಹಿಂದೆ ಸೆಪ್ಟೆಂಬರ್ 3 ರಂದು 5.0 ತೀವ್ರತೆಯ ಭೂಕಂಪ ದಾಖಲಾಗಿತ್ತು. ಅಲ್ಲದೆ, 2025ರ ಜನವರಿಯಲ್ಲಿ ಸಂಭವಿಸಿದ 6.8 ತೀವ್ರತೆಯ ಭೂಕಂಪದಲ್ಲಿ 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಎಂಬುದು ಗಮನಾರ್ಹ.

ಪ್ರವಾಹದ ಭೀತಿಯಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತ!

ಕಳೆದ ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಹಿಮ ಮತ್ತು ಬಂಡೆಗಳ ಕುಸಿತದಿಂದ ಟಿಬೆಟ್‌ನಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಪರಿಣಾಮ ನೂರಾರು ಮನೆಗಳು, ರಸ್ತೆಗಳು, ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು, ಪ್ರಮುಖ ಜಲವಿದ್ಯುತ್ ಯೋಜನೆಗಳಿಗೆ ಅಪಾರ ಹಾನಿಯಾಗಿತ್ತು.

ಟಿಬೆಟ್ ಗಡಿ ಭಾಗದಲ್ಲಿ ಪ್ರವಾಹಕ್ಕೆ 43 ಜನ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು. ಇನ್ನು ನೆರೆ ರಾಷ್ಟ್ರೀಯ ನೇಪಾಳದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ 1,455ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 5,285 ಜನರು ನಾಪತ್ತೆಯಾಗಿರುವ ಸುದ್ದಿ ಈಗಲೂ ಜನಮಾನಸದಲ್ಲಿಯೇ ಇದೆ. ಈ ವಿಕೋಪದಿಂದ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ಮತ್ತು ಪುನರ್ವಸತಿ ಕಲ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಹೊತ್ತಿನಲ್ಲಿ ಭೂಕಂಪವಾಗಿರುವುದು ಟಿಬೆಟ್‌ ಪಾಲಿಗೆ ನುಂಗಲಾರದ ತುತ್ತಾಗಿದೆ.

ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಹಿಮನದಿಗಳ ಕರಗುವಿಕೆ ಮತ್ತು ತೀವ್ರ ಹವಾಮಾನ ವೈಪರೀತ್ಯಗಳು ಟಿಬೆಟ್ ಪ್ರಸ್ಥಭೂಮಿಯಲ್ಲಿ ನೈಸರ್ಗಿಕ ವಿಕೋಪಗಳ ಅಪಾಯವನ್ನು ತೀವ್ರವಾಗಿ ಹೆಚ್ಚಿಸುತ್ತಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
#TibetEarthquake #NaturalDisaster #ChinaEarthquake #Nagqu #TibetFloods #UdayakalaNews #BreakingNews #WorldNews #EarthquakeUpdate

Related Posts

Leave a Reply

Your email address will not be published. Required fields are marked *