ಉದಯಕಾಲ ನ್ಯೂಸ್, ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಯಾದ ‘ಗೃಹ ಜ್ಯೋತಿ’ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ನೀಡಿರುವ ಅಂತಿಮ ಗಡುವು ಅಕ್ಟೋಬರ್ 31ಕ್ಕೆ ಮುಕ್ತಾಯಗೊಳ್ಳಲಿದೆ. ಈವರೆಗೆ ವಿವಿಧ ಕಾರಣಗಳಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಕೂಡಲೇ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸುವಂತೆ ಬೆಸ್ಕಾಂ (BESCOM) ವಿನಂತಿಸಿದೆ.
ಕಳೆದ ಮೂರುವರೆ ತಿಂಗಳಿನಿಂದ ಈ ಸಮೀಕ್ಷೆ ನಿರಂತರವಾಗಿ ನಡೆಯುತ್ತಿದ್ದು, ಮನೆಗೆ ಬೀಗ ಹಾಕಿರುವ, ಮನೆ ಖಾಲಿ ಇರುವ ಹಾಗೂ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಗ್ರಾಹಕರಿಗೆ ಬೆಸ್ಕಾಂ ಕಚೇರಿಗೆ ತೆರಳಿ ದಾಖಲಾತಿ ಸಲ್ಲಿಸಲು ರಾಜ್ಯ ಸರ್ಕಾರ ವಿಶೇಷ ಅವಕಾಶ ಕಲ್ಪಿಸಿದೆ. ನಿಗದಿತ ಗಡುವಿನೊಳಗೆ ದಾಖಲಾತಿಗಳನ್ನು ಸಲ್ಲಿಸಲು ಇದುವೇ ಕೊನೆಯ ಅವಕಾಶವಾಗಿದ್ದು, ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಸಮೀಕ್ಷೆಯ ಪ್ರಗತಿಯಾಧಾರಿತ ಅಂಕಿಅಂಶಗಳು
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಸೇರಿದಂತೆ ಒಟ್ಟು 74,29,773 ಗೃಹಜ್ಯೋತಿ ಫಲಾನುಭವಿಗಳಿದ್ದಾರೆ.ಈ ಪೈಕಿ ಅಕ್ಟೋಬರ್ 22ರ ವರೆಗೆ ಒಟ್ಟು 73,17,687 ಗ್ರಾಹಕರ ಸಮೀಕ್ಷೆ (ಶೇ. 98.49) ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಮೀಕ್ಷೆ ವೇಳೆ ಬೀಗ ಹಾಕಿರುವ ಹಾಗೂ ಖಾಲಿ ಇರುವ ಮನೆಗಳಿಗೆ ಬೆಸ್ಕಾಂ ಸಿಬ್ಬಂದಿ ಮೂರು ಬಾರಿ ಭೇಟಿ ನೀಡಿದ್ದು, ಅಂತಹ ಗ್ರಾಹಕರ ಮೊಬೈಲ್‌ಗಳಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಎಚ್ಚರಿಕೆ ಸಂದೇಶಗಳನ್ನು (SMS) ಕೂಡ ಕಳುಹಿಸಲಾಗಿತ್ತು.
ಅಕ್ಟೋಬರ್ 31 ಕೊನೆಯ ದಿನಾಂಕವಾಗಿರುವುದರಿಂದ, ಇದುವರೆಗೆ ಸಮೀಕ್ಷೆ ಮಾಡಿಸಿಕೊಳ್ಳದ ಅಥವಾ ದಾಖಲೆಗಳನ್ನು ನೀಡದ ಗ್ರಾಹಕರು ಕೂಡಲೇ ಎಚ್ಚೆತ್ತುಕೊಂಡು ಸಮೀಪದ ಬೆಸ್ಕಾಂ ಉಪ ವಿಭಾಗ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಕೋರಲಾಗಿದೆ.
#GruhaJyothi #BESCOM #KarnatakaGovernment #UdayakalaNews #PowerSubsidy #BengaluruNews #ConsumerUpdate #KarnatakaUpdates


