Menu

ಕೋಲ್ಕತ್ತಾ ಏರ್‌ಪೋರ್ಟ್ ಹಾಗೂ ದೆಹಲಿ, ಮುಂಬೈ ಶಾಲೆಗಳಿಗೆ ಬಾಂಬ್ ಬೆದರಿಕೆ: ತೀವ್ರ ಶೋಧ!

ಉದಯಕಾಲ ನ್ಯೂಸ್, ನವದೆಹಲಿ/ಕೋಲ್ಕತ್ತಾ: ದೇಶದ ಪ್ರಮುಖ ಮಹಾನಗರಗಳಲ್ಲಿ ಮತ್ತೊಮ್ಮೆ ಭದ್ರತಾ ವಲಯದಲ್ಲಿ ಆತಂಕ ಸೃಷ್ಟಿಸುವ ಬೆಳವಣಿಗೆಯೊಂದು ನಡೆದಿದ್ದು, ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದೆಹಲಿ ಮತ್ತು ಮುಂಬೈನ ಪ್ರಮುಖ ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಈ ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಮತ್ತು ಆಡಳಿತ ಯಂತ್ರದಲ್ಲಿ ತೀವ್ರ ಸಂಚಲನ ಮೂಡಿದ್ದು, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಕೋಲ್ಕತ್ತಾದ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಸುಮಾರು 8:55ರ ಸುಮಾರಿಗೆ ಮಹಿಳಾ ಶೌಚಾಲಯದಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಟಿಶ್ಯೂ ಪೇಪರ್ ಮೇಲೆ ಬಂಗಾಳಿ ಭಾಷೆಯಲ್ಲಿ ಕೈಬರಹದಿಂದ ಬರೆದಿರುವ ಬಾಂಬ್ ಬೆದರಿಕೆಯ ಸಂದೇಶ ಪತ್ತೆಯಾಗಿದೆ. ವಿಮಾನ ನಿಲ್ದಾಣದ ಗೇಟ್ ನಂಬರ್ 23ರಲ್ಲಿ ಬಾಂಬ್ ಇಡಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗೇಟ್ 23ಅನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಸ್ಥಳಕ್ಕೆ ಧಾವಿಸಿರುವ ಸಿಐಎಸ್‌ಎಫ್ ಸಿಬ್ಬಂದಿ, ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನದಳದೊಂದಿಗೆ ತೀವ್ರ ಶೋಧ ಕಾರ್ಯವನ್ನು ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

ರಾಜಧಾನಿ ಶಾಲೆಗಳಿಗೆ ಬಾಂಬ್‌ ಬೆದರಿಕೆ

ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿಯ ವೆಂಕಟೇಶ್ವರ ಪಬ್ಲಿಕ್ ಸ್ಕೂಲ್ ಮತ್ತು ಮಯೂರ್ ವಿಹಾರ್‌ನ ಸಲ್ವಾನ್ ಪಬ್ಲಿಕ್ ಸ್ಕೂಲ್ ಸೇರಿದಂತೆ ಮುಂಬೈನ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಮಾಹಿತಿ ತಿಳಿಯುತ್ತಿದ್ದಂತೆ ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಆಯಾ ಶಾಲೆಗಳ ಸ್ಥಳಕ್ಕೆ ದೌಡಾಯಿಸಿ ಕೂಲಂಕಷ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಈವರೆಗೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಕೇವಲ ಒಂದು ವಾರದ ಹಿಂದೆ ಅಕ್ಟೋಬರ್ 15ರಂದೂ ಕೂಡ ದೆಹಲಿಯ ಹಲವು ಶಾಲೆಗಳಿಗೆ ಇಂತಹದೇ ಬೆದರಿಕೆಗಳು ಬಂದಿದ್ದವು ಎಂಬುದು ಗಮನಾರ್ಹ.

ಸರಣಿ ಬಾಂಬ್ ಬೆದರಿಕೆಗಳ ಹಿನ್ನೆಲೆಯಲ್ಲಿ ಪೊಲೀಸರು ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳ ಸುತ್ತಲೂ ಗಸ್ತು ತಿರುಗುವುದನ್ನು ತೀವ್ರಗೊಳಿಸಿದ್ದು, ಬೆದರಿಕೆ ಬಂದ ಇಮೇಲ್‌ಗಳು ಮತ್ತು ಮೂಲಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಯಾವುದೇ ರೀತಿಯ ವಂತೆ ಕಿವಿಗೊಡದೆ, ಆವರಣದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
#BombThreat #KolkataAirport #DelhiSchools #MumbaiSchools #SecurityAlert #UdayakalaNews #CISF #BreakingNews #NationalNews

Related Posts

Leave a Reply

Your email address will not be published. Required fields are marked *