ದಕ್ಷಿಣ ದೆಹಲಿಯ ಲೋಧಿ ರಸ್ತೆ ಪ್ರದೇಶದ ಬಿ.ಕೆ. ದತ್ ಕಾಲೋನಿಯಲ್ಲಿ ನಡೆದ ಭೀಕರ ಅಗ್ನಿ ದುರಂತವೊಂದರಲ್ಲಿ ತಾಯಿ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಅಸು ನೀಗಿದ್ದಾರೆ. ವಸತಿ ಕಟ್ಟಡದ ಮೂರನೇ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಈ ದುರ್ಘಟನೆ ಸಂಭವಿಸಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಬಿ-ಬ್ಲಾಕ್‌ನಲ್ಲಿರುವ ಚಾವ್ಲಾ ಸ್ವೀಟ್ಸ್ ಎದುರಿನ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ದೆಹಲಿ ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ
ಸಿಬ್ಬಂದಿ, ಬೆಂಕಿ ನಂದಿಸಲು ಮತ್ತು ರಕ್ಷಣಾ ಕಾರ್ಯಕ್ಕಾಗಿ ಹಲವು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮುನ್ನ, ಉರಿಯುತ್ತಿರುವ ಮನೆಯ ಒಳಗಿನಿಂದ ಚೀರುತ್ತಿದ್ದ ಮಹಿಳೆಯೊಬ್ಬರು ಪೊಲೀಸ್ ನಿಯಂತ್ರಣ ಕೋಣೆಗೆ ನಡುಗುವ ಧ್ವನಿಯಲ್ಲಿ ಕರೆ ಮಾಡಿದ್ದರು. ಮನೆಗೆ ಬೆಂಕಿ ಹೊತ್ತಿಕೊಂಡಿದೆ. ನಾವು ಒಳಗೆ ಸಿಲುಕಿಕೊಂಡಿದ್ದೇವೆ, ದಯವಿಟ್ಟು ರಕ್ಷಣೆಗೆ ಬೇಗ ಸಹಾಯ ಮಾಡಿ ಎಂದು ಆಕೆ ಅಳುತ್ತಾ ಬೇಡಿಕೊಂಡಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಹಾಗೂ ಉರಿ ಹೆಚ್ಚಾಗಿ ಆಕೆಯ ಧ್ವನಿ ಕ್ಷೀಣಿಸಿ, ಫೋನ್ ಸ್ಥಗಿತಗೊಂಡಿದೆ.
ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ಸಿಬ್ಬಂದಿ ಮೂರನೇ ಮಹಡಿಯ ಅಪಾರ್ಟ್‌ಮೆಂಟ್ ಅನ್ನು ಸಂಪೂರ್ಣವಾಗಿ ಆವರಿಸಿದ್ದ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ತೀವ್ರ ಪರಿಶ್ರಮದ ಬಳಿಕ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಯಿತು. ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ, 45 ವರ್ಷ ವಯಸ್ಸಿನ ಮಹಿಳೆ ಹಾಗೂ ಅವರ 7 ಮತ್ತು 13 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಮೂವರೂ ಉಸಿರುಗಟ್ಟಿ ಹಾಗೂ ಸುಟ್ಟು ಕರಕಲಾಗಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ದೆಹಲಿ ಪೊಲೀಸ್ ಮತ್ತು ವಿಧಿವಿಜ್ಞಾನ
ಪ್ರಯೋಗಾಲಯದ ತಜ್ಞರ ತಂಡವು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದೆ.


