Monday, September 21, 2026
Menu

ಕಸ್ತೂರಿ ರಂಗನ್‌ ವರದಿ: ನೆಲಮಟ್ಟದ ಸರ್ವೆ ಮಾಡಿ, ಉತ್ತಮ ವಕೀಲರನ್ನು ನೇಮಿಸಲು ಆರ್‌ ಅಶೋಕ ಸಲಹೆ

ಎನ್‌ಜಿಟಿ ಆದೇಶದಂತೆ ಕೇಂದ್ರ ಸರ್ಕಾರ ಕಸ್ತೂರಿ ರಂಗನ್‌ ವರದಿ ಜಾರಿಗೆ ಅಧಿಸೂಚನೆ ಹೊರಡಿಸಿದೆಯೇ ಹೊರತು, ಸ್ವಯಂಪ್ರೇರಿತ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಈ ವಿಚಾರದಲ್ಲಿ ರಾಜಕೀಯ ಮಾಡದೆ ನೆಲಮಟ್ಟದ ಸರ್ವೆ ಹಾಗೂ ಕೋರ್ಟ್‌ನಲ್ಲಿ ಉತ್ತಮ ವಕೀಲರನ್ನು ನೇಮಿಸಿ ಮನವರಿಕೆ ಮಾಡಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಕಸ್ತೂರಿ ರಂಗನ್‌ ವರದಿ ಸಂಬಂಧ ಮಾತನಾಡಿದ ಅವರು, ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ರೈತರ ಬದುಕಿಗೆ ಬಹಳ ತೊಂದರೆಯಾಗಲಿದೆ. ಪರಿಸರವನ್ನೂ ರಕ್ಷಣೆ ಮಾಡಬೇಕು, ಜನರ ಬದುಕು ಕೂಡ ಉಳಿಯಬೇಕು. ಪಶ್ಚಿಮಘಟ್ಟ 1,64,280 ಚದರ ಕಿ.ಮೀ. ವ್ಯಾಪ್ತಿಯಲ್ಲಿದೆ. ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಹಬ್ಬಿಕೊಂಡಿದೆ. 40 ಲಕ್ಷ ಕಾರ್ಬನ್‌ ಹೀರಿಕೊಳ್ಳುವ ಸಾಮರ್ಥ್ಯ ಈ ಪ್ರದದೇಶಕ್ಕಿದೆ. ಎಂಟು ಜೀವವೈವಿಧ್ಯ ತಾಣ, 325 ಕ್ಕೂ ಹೆಚ್ಚು ಜೀವ ಪ್ರಬೇಧಗಳಿವೆ. 75 ಕ್ಕೂ ಹೆಚ್ಚು ಉಪ ಪ್ರಬೇಧಗಳಿವೆ. ಪಶ್ಚಿಮ ಘಟ್ಟದ 39 ಸ್ಥಳಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಕ್ಕೆ ಸೇರಿಸಲಾಗಿದೆ ಎಂದು ಪರಿಸರವಾದಿಗಳು ಹೇಳಿದ್ದಾರೆ. ಈ ಭಾಗದಲ್ಲಿ ಸುಮಾರು 5 ಕೋಟಿ ಜನರು ವಾಸಿಸುತ್ತಿದ್ದಾರೆ. ಯುಪಿಎ ಸರ್ಕಾರದಲ್ಲಿ ಪರಿಸರ ಸಚಿವ ಜೈರಾಮ್‌ ರಮೇಶ್‌ 2010 ರ ಫೆಬ್ರವರಿಯಲ್ಲಿ ತಮಿಳುನಾಡಿಗೆ ಒಂದು ಸಭೆಗೆ ಹೋದಾಗ, ಪಶ್ಚಿಮ ಘಟ್ಟದ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆಯಾಯಿತು. ನಂತರ ಮಾಧವ ಗಾಡ್ಗೀಳ್‌ ಸಮಿತಿ ರಚಿಸಲಾಯಿತು. 316 ಪುಟಗಳ ಈ ವರದಿಯಲ್ಲಿ, ಪಶ್ಚಿಮ ಘಟ್ಟಕ್ಕೆ ಹೆಜ್ಜೆ ಕೂಡ ಇಡಬಾರದು ಎಂಬಂತಹ ಶಿಫಾರಸುಗಳಿವೆ. ಈ ಸಮಿತಿ ರಚಿಸಲು ಸುಪ್ರೀಂ ಕೋರ್ಟ್‌ ಅಥವಾ ಹಸಿರು ನ್ಯಾಯಪೀಠ ಆದೇಶ ನೀಡಿರಲಿಲ್ಲ. ಕೇಂದ್ರ ಸರ್ಕಾರವೇ ಸ್ವಯಂ ಪ್ರೇರಿತವಾಗಿ ಸಮಿತಿ ರಚಿಸಿತ್ತು ಎಂದು ವಿವರಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಾವು ಪಕ್ಷಬೇಧ ಮಾಡದ 224 ಶಾಸಕರ ಸಿಎಂ ಎಂದಿದ್ದರು. ಕಸ್ತೂರಿ ರಂಗನ್‌ ವರದಿ ಸಂಬಂಧ ನಮ್ಮೆಲ್ಲರನ್ನೂ ಕರೆದು ಚರ್ಚೆ ಮಾಡಿದ್ದರೆ ಒಪ್ಪಿಕೊಳ್ಳುತ್ತಿದ್ದೆವು. 2011 ರಲ್ಲಿ ಆಗಸ್ಟ್‌ನಲ್ಲಿ ಈ ವರದಿ ಸಲ್ಲಿಸಲಾಗಿತ್ತು. ಪಶ್ಚಿಮ ಘಟ್ಟದ ಎಲ್ಲ ಭಾಗವನ್ನೂ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದು ಅದರಲ್ಲಿ ಹೇಳಲಾಗಿದೆ. ಯಾವುದೇ ಕಾರಣಕ್ಕೂ ಕೈಗಾರಿಕೆಗೆ ಅವಕಾಶ ನೀಡಬಾರದು, ಇರುವ ಕಾರ್ಖಾನೆಗಳನ್ನು 2016 ರೊಳಗೆ ಸ್ಥಗಿತಗೊಳಿಸಬೇಕೆಂದು ಹೇಳಲಾಗಿತ್ತು. ಈ ವರದಿಯನ್ನು ಕೈ ಬಿಟ್ಟಿರುವುದರಿಂದ ಈ ಬಗ್ಗೆ ಚರ್ಚೆ ಅಗತ್ಯವಿಲ್ಲ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಆದರೆ ಈ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕೆಂದು ಗೋವಾ ಫೌಂಡೇಶನ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಕೇಂದ್ರ ಸರ್ಕಾರಕ್ಕೂ ಒತ್ತಾಯ ಮಾಡಲಾಗುತ್ತಿದೆ. ಈ ವರದಿ ವಿರುದ್ಧ ಹೋರಾಟ ನಡೆದ ನಂತರ, ಯುಪಿಎ ಸರ್ಕಾರದಿಂದ ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ರಚಿಸಲಾಯಿತು. ಈ ಸಮಿತಿ ಕೂಡ ಒಂದು ವರದಿ ನೀಡಿದೆ. 37% ಅಂದರೆ 59,940 ಚದರ ಕಿ.ಮೀ. ಮಾತ್‌ ಸೂಕ್ಷ್ಮ ಪ್ರದೇಶವೆಂದು ಘೋಷಿಸಬೇಕೆಂದು ಅವರು ಶಿಫಾರಸು ಮಾಡಿದ್ದರು. ಜನವಸತಿ ಪ್ರದೇಶ, ತೋಟಗಳನ್ನು ಹೊರಗಿಡಬೇಕು, ಕಲ್ಲು ಗಣಿ, ಉಷ್ಣ ವಿದ್ಯುತ್‌ ಸ್ಥಾವರ, ರೆಡ್‌ ಕೆಟಗರಿಯ ಕೈಗಾರಿಕೆ, ಮೊದಲಾದವನ್ನು ಸ್ಥಗಿತಗೊಳಿಸಬೇಕು, ಹೊಸ ಕೈಗಾರಿಕೆಗೆ ಪರಿಸರ ಅಧ್ಯಯನದ ನಂತರ ಮಾತ್ರ ಅನುಮತಿ ನೀಡಬೇಕು ಎಂಬಿತ್ಯಾದಿ ಶಿಫಾರಸು ಮಾಡಲಾಗಿದೆ. ಈ ವರದಿಯಲ್ಲಿ ಸ್ವಲ್ಪ ರಿಯಾಯಿತಿ ನೀಡಲಾಗಿದೆ ಎಂದರು.

ಗೋವಾ ಫೌಂಡೇಶನ್‌ನ ಹೋರಾಟ

ಗೋವಾ ಫೌಂಡೇಶನ್‌ ನಿರಂತರವಾಗಿ ಕೋರ್ಟ್‌ಗೆ ಹೋಗಿ ಆದೇಶಗಳನ್ನು ತಂದು ಕೇಂದ್ರ ಸರ್ಕಾರವನ್ನು ಕಟ್ಟಿ ಹಾಕುತ್ತಿದೆ. ಗಾಡ್ಗಿಳ್‌ ವರದಿಯಲ್ಲಿ ಇದ್ದ ಶಿಫಾರಸುಗಳನ್ನು ಏಕೆ ಕೈ ಬಿಡಲಾಗಿದೆ ಎಂದು ಪ್ರಶ್ನೆ ಮಾಡಿ ಈ ಸಂಘಟನೆ ಹಸಿರು ನ್ಯಾಯಪೀಠದ ಮೊರೆ ಹೋಗಿದೆ. ಹಸಿರು ನ್ಯಾಯಪೀಠ ಕೆಲವು ಷರತ್ತುಗಳನ್ನು ಹಾಕಿದ್ದು, ಈ ವರದಿಯನ್ನು ಕೈ ಬಿಡಬಾರದು ಎಂಬಂತೆ ಸೂಚಿಸಲಾಗಿದೆ. 2017 ರಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಬದಲಾವಣೆ ಇರಬಾರದು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸ್ವಲ್ಪವೂ ಬದಲಾಯಿಸಬಾರದು ಎಂದು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಏಳನೇ ಬಾರಿಗೆ ಅಧಿಸೂಚನೆ ಪ್ರಕಟಿಸಿದೆ. ಹಸಿರು ನ್ಯಾಯಪೀಠದ ಆದೇಶದ ಮೇರೆಗೆ ಈ ಆದೇಶ ಬಂದಿದೆ. ಒಂದು ಇಂಚು ಕಡಿಮೆ ಮಾಡಬೇಕೆಂದೂ ಎನ್‌ಜಿಟಿಯನ್ನು ಕೇಳಬೇಕಾಗಿದೆ. ರಾಜ್ಯ ಹಾಗೂ ಕೇಂದ್ರ ಎರಡಕ್ಕೂ ಇದು ಕಠಿಣ ಪರಿಸ್ಥಿತಿಯಾಗಿದೆ. ಕೇಂದ್ರ ಸರ್ಕಾರ ಈಗ ಸಂಜಯ್‌ ಕುಮಾರ್‌ ನೇತೃತ್ವದ ಸಮಿತಿ ರಚಿಸಿದ್ದು, 2027 ರವರೆಗೆ ಅವಧಿ ಇದೆ ಎಂದರು.

ಕಸ್ತೂರಿ ರಂಗನ್‌ ವರದಿಯಲ್ಲಿ ತಿಳಿಸಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ, ರಾಜ್ಯದಲ್ಲಿ 1576 ಗ್ರಾಮಗಳು ಹಾಗೂ 20,668 ಚದರ ಕಿ.ಮೀ. ವ್ಯಾಪ್ತಿ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ್ದೇ ಅಧಿಕ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶವಿದೆ. ಕಸ್ತೂರಿ ರಂಗನ್‌ ಅವರು ಸರ್ವೆ ಮಾಡುವಾಗ ಸ್ಯಾಟಲೈಟ್‌ ಚಿತ್ರ ಬಳಸಿದ್ದಾರೆ. ಗದ್ದೆ, ಕಾಫಿ ತೋಟ ಎಲ್ಲವನ್ನೂ ಅರಣ್ಯ ಪ್ರದೇಶ ಎಂದು ತೋರಿಸಲಾಗಿದೆ. ಕಾಡಂಚಿನ ತೋಟಗಳನ್ನೂ ಇದರಲ್ಲಿ ತೋರಿಸಲಾಗಿದೆ. ಹತ್ತು ಜಿಲ್ಲೆಗಳ ಲಕ್ಷಾಂತರ ರೈತರಿಗೆ ಇದರಿಂದ ಸಮಸ್ಯೆಯಾಗಿದೆ. ಈ ವರದಿ ಜಾರಿಯಾದರೆ ಗ್ರಾಮಗಳಲ್ಲಿ ರಸ್ತೆ ನಿರ್ಮಿಸಲು ಆಗುವುದಿಲ್ಲ. ಅರಣ್ಯ ಹಾಗೂ ಕಂದಾಯ ಇಲಾಖೆಗಳ ನಡುವೆ ಹೊಂದಾಣಿಕೆ ಆಗದೇ ಇರುವುದರಿಂದ ಕೆಲವು ಗ್ರಾಮಗಳಲ್ಲಿ ರಸ್ತೆ ನಿರ್ಮಿಸಲು ಆಗುವುದಿಲ್ಲ. ಆದ್ದರಿಂದ ಅರಣ್ಯ ಹಾಗೂ ಕಂದಾಯ ಇಲಾಖೆಯ ನಡುವೆ ಹೊಂದಾಣಿಕೆ ತರಬೇಕು. ಈ ಕೆಲಸವನ್ನು ಸರ್ಕಾರ ಮೊದಲು ಮಾಡಬೇಕು. ಮಳೆಗಾಲದಲ್ಲಿ ಸೇತುವೆ ಕುಸಿದರೂ ಅದನ್ನು ದುರಸ್ತಿ ಮಾಡಲು ಸಾಧ್ಯವಾಗುವುದಿಲ್ಲ, ವಿದ್ಯುತ್‌ ಸಂಪರ್ಕ ನೀಡಲಾಗುವುದಿಲ್ಲ. ಅರಣ್ಯ ಇಲಾಖೆಯಿಂದ ಬಫರ್‌ ಜೋನ್‌ ರೂಪಿಸಿದರೆ ಇನ್ನಷ್ಟು ಸಂಕಷ್ಟ ಬರುತ್ತದೆ. ಸಣ್ಣ ಮನೆ  ದುರಸ್ತಿ ಕೂಡ ಮಾಡಲಾಗುವುದಿಲ್ಲ. ಕಾಣೆ ಜಮೀನು, ಸೊಪ್ಪಿನ ಬೆಟ್ಟ ಮುಟ್ಟಲಾಗುವುದಿಲ್ಲ. ಕಸ್ತೂರಿ ರಂಗನ್‌ ವರದಿಯಲ್ಲಿ, ಪ್ರತಿ ಯೋಜನೆಯೂ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕೆಂದು ಹೇಳಲಾಗಿದೆ. ಇದು ಆ ಭಾಗದ ಜನರಿಗೆ ಮಾರಕವಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರದ ಸಚಿವರು ಇದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಆದೇಶ ಎಂದು ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು. ನಾವು ಕೂಡ ರಾಜಕೀಯ ಮಾಡದೆ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತೇವೆ. ಇದು ಕೋರ್ಟ್‌ ಆದೇಶದ ಪ್ರಕಾರ ಆಗುತ್ತಿರುವ ಆದೇಶವೇ ಹೊರತು ಎನ್‌ಡಿಎ ಸರ್ಕಾರ ಮಾಡಿಲ್ಲ.  ಕೇರಳ ಸರ್ಕಾರದ ಮಾದರಿ ಅನುಸರಿಸಬೇಕಾಗುತ್ತದೆ. ಕೇರಳ ಸರ್ಕಾರ ನೆಲಮಟ್ಟದ ಪರಿಶೀಲನೆ ಮಾಡಿ, ಪ್ರತಿ ಹಳ್ಳಿಗಳಿಗೆ ಹೋಗಿ ಎಲ್ಲೆಲ್ಲಿ ತೋಟ, ಮನೆ ಇದೆ ಎಂದು ಪತ್ತೆ ಮಾಡಿ ವರದಿ ರೂಪಿಸಿದೆ. ಈ ವರದಿಯನ್ನು ಎನ್‌ಜಿಟಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವುದರಿಂದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಇದನ್ನೇ ರಾಜ್ಯ ಸರ್ಕಾರ ಮಾಡಿದರೆ ನಮ್ಮ ರಾಜ್ಯದ ಜನರ ತೋಟ, ಮನೆಗಳು ಉಳಿಯಲಿದೆ ಎಂದರು.

ರಾಜ್ಯ ಸರ್ಕಾರ ಏನು ಮಾಡಬೇಕು? ಕೇಂದ್ರ ಸರ್ಕಾರಕ್ಕೆ ಯಾವ ವರದಿ ಸಲ್ಲಿಸಬೇಕು? ಹಾಗೂ ಎನ್‌ಜಿಟಿಯಲ್ಲಿ ಹೇಗೆ ಮನವರಿಕೆ ಮಾಡಬೇಕೆಂಬ ಮೂರು ಅಂಶಗಳನ್ನು ಸರ್ಕಾರ ಗಮನಿಸಬೇಕು. ಕೇರಳದಲ್ಲಿ ನೆಲಮಟ್ಟದ ಪರಿಶೀಲನೆ ಮಾಡಿ ಸಲ್ಲಿಸಿದ ವರದಿಯಿಂದಾಗಿ ಬಫರ್‌ ಜೋನ್‌ ಶೂನ್ಯವಾಗಿದೆ. ಇದೇ ರೀತಿ ರಾಜ್ಯ ಸರ್ಕಾರ ನೆಲಮಟ್ಟದ ಪರಿಶೀಲನೆ ಮಾಡಿ ವರದಿ ರೂಪಿಸಿ ಕೇಂದ್ರ ಸರ್ಕಾರ ಹಾಗೂ ಎನ್‌ಜಿಟಿಗೆ ವರದಿ ಸಲ್ಲಿಸಬೇಕು. ಹಾಗೆಯೇ ಪರಿಸರದ ಬಗ್ಗೆ ಜ್ಞಾನವಿರುವ ಉತ್ತಮ ವಕೀಲರನ್ನು ಸುಪ್ರೀಂ ಕೋರ್ಟ್‌ನಲ್ಲಿ ನೇಮಿಸಿ ವಾದಿಸಬೇಕು ಎಂದು ಸಲಹೆ ನೀಡಿದರು.

ಒಂದು ವೇಳೆ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ವರದಿ ಜಾರಿ ಮಾಡಿ ಎಂದು ಎನ್‌ಜಿಟಿ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಈಗ ಏನೂ ಮಾಡದೇ ಸುಮ್ಮನಿದ್ದರೆ ವರದಿ ಖಂಡಿತ ಜಾರಿಯಾಗಲಿದೆ. ಆದ್ದರಿಂದ ನೆಲಮಟ್ಟದ ಸರ್ವೆಯನ್ನು ಮಾಡುವ ಸವಾಲನ್ನು ನಾವು ಸ್ವೀಕಾರ ಮಾಡಬೇಕು. ಈ ಕುರಿತು ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಯಶಸ್ಸು ಸಿಗುತ್ತದೆ ಎಂದರು.

ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಒಂದು ವಾರ ಅಧಿವೇಶನ ನಡೆಸಬೇಕು. ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಹತ್ತನೇ ಅಧಿವೇಶನ- ಮುಂದುವರಿದ ಉಪವೇಶನ ಎಂದು ಉಲ್ಲೇಖಿಸಿ ಬಳಿಕ ವಿಶೇಷ ಅಧಿವೇಶನ ಎಂದು ಬರೆಯಲಾಗಿದೆ. ಕಳೆದ ಬಾರಿ ಅಧಿವೇಶನಕ್ಕೆ ಮೊಟಕುಗೊಳಿಸಲಾಗಿತ್ತು. ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಅಂದು ಹೇಳಿ ಈಗ ವಿಶೇಷ ಅಧಿವೇಶನ ಕರೆಯಲು ಹೇಗೆ ಸಾಧ್ಯ? ಇದು ಮುಂದುವರಿದ ಅಧಿವೇಶನ ಎಂದಾಗಬೇಕಿತ್ತು. ಆದ್ದರಿಂದ ಸುತ್ತೋಲೆಯನ್ನು ಕೈ ಬಿಡಬೇಕು. ಒಂದೇ ಸಮಯದಲ್ಲಿ ಎರಡು ಅಧಿವೇಶನ ಕರೆಯಲು ಸಾಧ್ಯವಿಲ್ಲ. ಕಸ್ತೂರಿ ರಂಗನ್‌ ವರದಿಯನ್ನು ಒಂದು ಚರ್ಚೆಯಾಗಿ ತಂದಿದ್ದರೆ ಸಾಕಿತ್ತು. ಇದನ್ನೇ ಮುಂದುವರಿಸಿ ಒಂದು ವಾರ ಅಧಿವೇಶನ ನಡೆಸಿ. ಕಸ್ತೂರಿ ರಂಗನ್‌ ವರದಿಯನ್ನು ಈ ಸರ್ಕಾರ ವಿರೋಧಿಸುವ ಮೊದಲೇ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ವಿರೋಧ ಮಾಡಿದ್ದರು. ನಿಯಮ ಲೋಪ ಆಗಬಾರದು ಎಂದರೆ ಸುತ್ತೋಲೆಯಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *