ಉದಯಕಾಲ ನ್ಯೂಸ್, ಬೆಂಗಳೂರು: ಮಳೆಗಾಲ ಆರಂಭಕ್ಕೂ ಮುನ್ನವೇ ಬೆಂಗಳೂರು ನಗರದಲ್ಲಿ ರಾಜಕಾಲುವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ರಾಜಕಾಲುವೆಗಳ ಒತ್ತುವರಿ, ಅಡೆತಡೆಗಳು ಮತ್ತು ಒಳಚರಂಡಿ ನಿರ್ವಹಣೆಯಿಲ್ಲದೆ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಅವರು ಖುದ್ದು ಸ್ಥಳ ಪರಿಶೀಲನೆ ನಡೆಸಿ ಗಂಭೀರವಾಗಿ ಪರಿಗಣಿಸಿದ್ದಾರೆ.
ಜೆ.ಪಿ. ನಗರ ಹಾಗೂ ಬನ್ನೇರುಘಟ್ಟ ರಸ್ತೆ ಸ್ಥಳ ಪರಿಶೀಲನೆ
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜೆ.ಪಿ. ನಗರ 4ನೇ ಹಂತದ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ವೈಷ್ಣವಿ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಹಾದುಹೋಗುವ ಮಳೆನೀರು ಕಾಲುವೆ ಪ್ರದೇಶಗಳಿಗೆ ಆಯುಕ್ತರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬನ್ನೇರುಘಟ್ಟ ರಸ್ತೆಯ ರಾಯಲ್ ಓಕ್ ಶೋರೂಮ್ ಪಕ್ಕದ ರಾಜಕಾಲುವೆ ಸೇತುವೆಗೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮೆಟ್ಟಿಲುಗಳಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿರುವುದನ್ನು ಗಮನಿಸಿದ ಅವರು, ತಕ್ಷಣವೇ ಆ ಮೆಟ್ಟಿಲುಗಳನ್ನು ತೆರವುಗೊಳಿಸಿ ಇಳಿಜಾರು ನಿರ್ಮಿಸಲು ಆದೇಶಿಸಿದರು. ಅಲ್ಲದೆ, ಕಟ್ಟೆ ಮುನೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಖಾಲಿ ಜಾಗದಲ್ಲಿ ಎಲ್ಲೆಂದರಲ್ಲಿ ಸುರಿಯಲಾಗಿರುವ ಕಟ್ಟಡ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು.
ರಾಜಕಾಲುವೆ ಸರ್ವೇ – ಹೂಳೆತ್ತಲು ಆದೇಶ
ವೈಷ್ಣವಿ ಅಪಾರ್ಟ್ಮೆಂಟ್ ಮತ್ತು ಕಲ್ಯಾಣಿ ಮ್ಯಾಗ್ನಮ್ ಎದುರಿನ ರಾಜಕಾಲುವೆಯನ್ನು ಪರಿಶೀಲಿಸಿದ ಆಯುಕ್ತರು, ಸಾರಕ್ಕಿ ಕೆರೆ ಕಡೆಯಿಂದ ಬರುವ ನೀರು ಮಡಿವಾಳ ಕೆರೆಗೆ ಹರಿದು ಹೋಗುವ ಈ ಮಾರ್ಗದಲ್ಲಿ ಕಾಲುವೆಯನ್ನು ಮುಚ್ಚಿರುವುದು (ಸ್ಲ್ಯಾಬ್ ಕವರಿಂಗ್) ಮತ್ತು ಕೃತಕ ತಿರುವುಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕಂದಾಯ ಇಲಾಖೆಯ ದಾಖಲೆಗಳ ಅನುಸಾರ ರಾಜಕಾಲುವೆಯ ನೈಜ ಹರಿವಿನ ಜಾಗವನ್ನು ಕೂಡಲೇ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಜಕಾಲುವೆಯ ಒಳಭಾಗದಲ್ಲಿ ಸಿಲುಕಿರುವ ಕಟ್ಟಡ ಹಾಗೂ ಘನತ್ಯಾಜ್ಯದಿಂದ ನೀರು ನಿಂತು ದುರ್ವಾಸನೆ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ರೇನ್ಬೋ ಆಸ್ಪತ್ರೆ ಹಿಂಭಾಗ ಹಾಗೂ ಕಾಂಪೌಂಡ್ ಗೋಡೆ ಇರುವ ಜಾಗದಲ್ಲಿ ತುರ್ತಾಗಿ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲು ತಿಳಿಸಿದರು. ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಪ್ರವಾಹದ ಸ್ಥಿತಿ ನಿರ್ಮಾಣವಾಗದಂತೆ ಸರಾಗ ನೀರಿನ ಹರಿವಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸೂಚನೆ ನೀಡಿದರು.

ಸುಗಮ ಸಂಚಾರಕ್ಕೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗ ವಿಸ್ತರಣೆ
ಜೆ.ಪಿ.ನಗರ 4ನೇ ಹಂತದ ಮೆಟ್ರೋ ನಿಲ್ದಾಣದಿಂದ ಹೊರಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತರಿಸಿ ಸುಸ್ಥಿತಿಯಲ್ಲಿಡುವಂತೆ ತಿಳಿಸಲಾಯಿತು. ಮುಖ್ಯ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ, ಸರ್ವಿಸ್ ರಸ್ತೆಯ ಕಡೆಗೆ ವಿಭಜಕ ಅಳವಡಿಸಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ವ್ಯವಸ್ಥಿತ ನಿಲುಗಡೆಗೆ ಸ್ಥಳ ನಿಗದಿಪಡಿಸುವಂತೆ ಬಿಎಂಆರ್ಸಿಎಲ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಈ ಪರಿಶೀಲನೆ ವೇಳೆ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಮಾಲತಿ ಸೇರಿದಂತೆ ಇಲಾಖೆಯ ಇಂಜಿನಿಯರ್ಗಳು ಉಪಸ್ಥಿತರಿದ್ದರು.
#UdayakalaNews #BangaloreNews #GBA#Rajakaluve #JPNagar #CivicNews #BengaluruSouth #CommissionerKNRamesh


