ನಕಲಿ ಔಷಧ ತಯಾರಿಕೆ ಮತ್ತು ಪೂರೈಕೆ ಜಾಲದ ವಿರುದ್ಧ ತನಿಖೆ ತೀವ್ರಗೊಂಡಿದ್ದು, ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪದಡಿ ಎಫ್‌ಡಿಎ ಓಂಕಾರೇಶ್ವರ್ ಅವರನ್ನು ಅಮಾನತುಗೊಳಿಸಲಾಗಿದೆ.
ನಕಲಿ ಔಷಧ ದಂಧೆ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲಿ ತೆಗೆದುಕೊಂಡ ಮೊದಲ ಕ್ರಮವಾಗಿದೆ. ಆರೋಗ್ಯ ಸಚಿವ ಸಚಿವ ಯುಟಿ ಖಾದರ್ ಉನ್ನತ ಮಟ್ಟದ ಸಭೆ ನಡೆಸಿ ಈ ಮಹತ್ವದ ಮಾಹಿತಿ ನೀಡಿದ್ದಾರೆ. ನಕಲಿ ಔಷಧಗಳ ಮಾರಾಟಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಔಷಧ ಗುಣಮಟ್ಟದಲ್ಲಿ ವಿಫಲವಾದ, ನಕಲಿ ಔಷಧ ಅಥವಾ ತಪ್ಪು ಲೇಬಲಿಂಗ್ ಕಂಡುಬಂದ ತಯಾರಿಕಾ ಕಂಪನಿಗಳನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ರಾಜ್ಯ ಎಫ್‌ಡಿಎ ಮುಂದಾಗಿದೆ.
ತಪ್ಪಿತಸ್ಥ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವುದರ ಜತೆಗೆ ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದ್ದು, ಕಾನೂನು ಬದಲಾವಣೆಗೆ ರಾಜ್ಯ ಎಫ್‌ಡಿಎ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈಗಾಗಲೇ 16 ಫಾರ್ಮಸಿಗಳ ಲೈಸೆನ್ಸ್‌ಗಳನ್ನು ರದ್ದುಗೊಳಿಸಲಾಗಿದೆ.
ನಕಲಿ ಔಷಧಗಳು ಎಲ್ಲಿಗೆ ಪೂರೈಕೆಯಾಗಿವೆ, ಯಾವ ಆಸ್ಪತ್ರೆಗಳಿಗೆ ಹೋಗಿವೆ ಎಂಬ ಮಾಹಿತಿಯನ್ನು ಕಲೆಹಾಕಲು ಎಫ್‌ಡಿಎ ಮುಂದಾಗಿದೆ. ನಕಲಿ ಔಷಧ ಪಡೆದಿರುವ ರೋಗಿಗಳ ಮಾಹಿತಿಯನ್ನೂ ಸಂಗ್ರಹಿಸಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ನಕಲಿ ಔಷಧ ಸೇವನೆಯಿಂದ ರೋಗಿಗಳಿಗೆ ಏನಾದರೂ ತೊಂದರೆ ಉಂಟಾಗಿದೆಯೇ ಎಂಬ ಬಗ್ಗೆ ರೋಗಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಫೈಝರ್‌ನಂತಹ ಕಂಪನಿಗಳು ನಕಲಿ ಔಷಧಗಳಿಗೆ ಸಂಬಂಧಿಸಿದ ಎಸ್ಐಟಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವುಗಳ ಕಾರ್ಯಚಟುವಟಿಕೆಗಳನ್ನು ತಡೆಹಿಡಿದಿದ್ದಾರೆ. 12 ಫಾರ್ಮಾ ಕಂಪನಿಗಳಿಗೆ ನೋಟಿಸ್ ನೀಡಿ, ಲೈಸೆನ್ಸ್ ರದ್ದುಪಡಿಸಲು ಮುಂದಾಗಿರುವುದಾಗಿ ಖಾದರ್ ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಬಳಸುವ ಔಷಧಗಳ ಗುಣಮಟ್ಟದ ಬಗ್ಗೆ ಸಚಿವರು ಕಳವಳ ವ್ಯಕ್ತಪಡಿಸಿ, ಗುಣಮಟ್ಟ ಪರಿಶೀಲನೆಗೆ ವ್ಯವಸ್ಥೆಯಿದ್ದರೂ ಉತ್ತಮ ಪ್ರಯೋಗಾಲಯದ ಅಗತ್ಯವಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದ್ದು, ಉತ್ತಮ ಖಾಸಗಿ ಪ್ರಯೋಗಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡು ಆಸ್ಪತ್ರೆಗಳು ಹಾಗೂ ಫಾರ್ಮಾ ಕಂಪನಿಗಳಿಂದ ನೇರವಾಗಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಕಲಿ ಔಷಧ ಜಾಲವನ್ನು ಸಂಪೂರ್ಣವಾಗಿ ತಡೆಯಲು ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಖಾದರ್ ಆಹಾರ ಸುರಕ್ಷತಾ ಹಾಗೂ ಔಷಧ ನಿಯಂತ್ರಣ ಆಯುಕ್ತ ಶ್ರೀನಿವಾಸ್ ಮತ್ತು ಔಷಧ ನಿಯಂತ್ರಣ ಅಧಿಕಾರಿ ಉಮೇಶ್ ಅವರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು. ಆಸ್ಪತ್ರೆಗಳಿಗೆ ಔಷಧ ಸರಬರಾಜು, ಮುಚ್ಚಿರುವ ಫಾರ್ಮಸಿಗಳು, ನಕಲಿ ಔಷಧ ಪತ್ತೆ ಹಾಗೂ ಸರಬರಾಜು ಜಾಲದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.


