ಉದಯಕಾಲ ನ್ಯೂಸ್, ಬೆಂಗಳೂರು: ಭಾರತೀಯ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಕ್ ಪದಕ ವಿಜೇತ ದಿಗ್ಗಜ ಆಟಗಾರ ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ನಿವಾಸಕ್ಕೆ ಕಳ್ಳರು ನುಗ್ಗಿ, ಜೀವಮಾನದ ಅಮೂಲ್ಯ ಸಾಧನೆಯಾದ ಒಲಿಂಪಿಕ್ ಚಿನ್ನದ ಪದಕ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು, ಚಿನ್ನಾಭರಣ ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಾಜಿ ಹಾಕಿ ಆಟಗಾರ ಎಂ.ಎಂ. ಸೋಮಯ್ಯ ಅವರು ಬೆಂಗಳೂರಿನ ನ್ಯೂ ತಿಪ್ಪಸಂದ್ರದ ಬಿ.ಎಂ.ಕಾವಲ್ನಲ್ಲಿ ವಾಸವಿದ್ದಾರೆ. ಅಕ್ಟೋಬರ್ 25ರಂದು ಅವರು ತಮ್ಮ ಹುಟ್ಟೂರಾದ ಕೊಡಗಿಗೆ ಕುಟುಂಬ ಸಮೇತ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು, ಅಕ್ಟೋಬರ್ 28ರ ಮುಂಜಾನೆ ವೇಳೆ ಮನೆಯ ಬಾಗಿಲು ಮುರಿದು ಕೃತ್ಯವೆಸಗಿದ್ದಾರೆ. ಈ ಸಂಬಂಧ ಸೋಮಯ್ಯ ಅವರು ನೀಡಿದ ಅಧಿಕೃತ ದೂರಿನ ಆಧಾರದ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕಳುವಾದ ಅಮೂಲ್ಯ ಪದಕಗಳು ಹಾಗೂ ವಸ್ತುವಿನ ವಿವರ
ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಅಕ್ಟೋಬರ್ 28ರಂದು ರಾತ್ರಿ ನುಗ್ಗಿದ ಕಳ್ಳರು, ಕೇವಲ ಹಣ ಮತ್ತು ಆಭರಣಗಳಷ್ಟೇ ಅಲ್ಲದೆ, ದೇಶ ಕಂಡ ಮಹಾನ್ ಕ್ರೀಡಾಪಟುವೊಬ್ಬರ ದಶಕಗಳ ಶ್ರಮದ ಫಲವಾದ ಐತಿಹಾಸಿಕ ಪದಕಗಳನ್ನೇ ಕಳವು ಮಾಡಿದ್ದಾರೆ. ದೂರಿನನ್ವಯ ಕಳುವಾದ ಪ್ರಮುಖ ವಸ್ತುಗಳ ವಿವರ ಹೀಗಿದೆ:
1980ರ ಮಾಸ್ಕೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡಕ್ಕಾಗಿ ಗೆದ್ದಿದ್ದ ಅಮೂಲ್ಯ ಚಿನ್ನದ ಪದಕ.
1982ರ ನವದೆಹಲಿ ಏಷ್ಯನ್ ಗೇಮ್ಸ್ನಲ್ಲಿ ಗೆದ್ದಿದ್ದ ಬೆಳ್ಳಿ ಪದಕ.
1986ರ ಸಿಯೋಲ್ ಏಷ್ಯನ್ ಗೇಮ್ಸ್ನಲ್ಲಿ ಗೆದ್ದಿದ್ದ ಕಂಚಿನ ಪದಕ.
1982ರ ಆಂಸ್ಟರ್ಡ್ಯಾಮ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದಿದ್ದ ಮತ್ತೊಂದು ಕಂಚಿನ ಪದಕ.
ಇದರೊಂದಿಗೆ ವೈಯಕ್ತಿಕ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಒಟ್ಟು ಅಂದಾಜು 3.53 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಸೆರೆ; ಪೊಲೀಸರಿಂದ ತನಿಖೆ
ಅಕ್ಟೋಬರ್ 28ರಂದು ಬೆಳಿಗ್ಗೆ ಸುಮಾರು 7:15ರ ವೇಳೆಗೆ ಸೋಮಯ್ಯ ಅವರ ಮನೆಯ ಮುಖ್ಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಮನೆಯವರು ತಕ್ಷಣವೇ ಅವರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಅಕ್ಕಪಾಸಿನ ಮನೆಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಂದೇ ರಾತ್ರಿ ಸುಮಾರು 2:34ರ ಸುಮಾರಿಗೆ ಇಬ್ಬರು ಕಳ್ಳರು ಮುಖಕ್ಕೆ ಮುಖಗವಸು ಧರಿಸಿ ಮನೆಯ ಬಾಗಿಲು ಮೀಟಿ ಒಳನುಗ್ಗಿರುವುದು ಸ್ಪಷ್ಟವಾಗಿ ಸೆರೆಯಾಗಿದೆ.
ಸೋಮಯ್ಯ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(4) ಮತ್ತು 305ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೇಶದ ಕ್ರೀಡಾ ದಿಗ್ಗಜರೊಬ್ಬರ ಅಮೂಲ್ಯ ಪದಕಗಳೇ ಕಳುವಾಗಿರುವುದು ಕ್ರೀಡಾ ವಲಯದಲ್ಲಿ ತೀವ್ರ ಕಳವಳ ಮೂಡಿಸಿದ್ದು, ಸಿಸಿಟಿವಿ ತುಣುಕುಗಳ ಆಧಾರದ ಮೇಲೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಪದಕಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
#MMSomaiya #HockeyLegend #BengaluruCrime #OlympicGoldMedalStolen #IndiranagarPolice #UdayakalaNews


