ಉದಯಕಾಲ ನ್ಯೂಸ್, ನವದೆಹಲಿ: ಹಳೆಯ ದೆಹಲಿಯ ಜನದಟ್ಟಣೆಯ ಚಾವರಿ ಬಜಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಹಳೆಯ ಕಟ್ಟಡವೊಂದು ಮಂಗಳವಾರ ದಿಢೀರ್ ಕುಸಿದುಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಕಟ್ಟಡದ ಅವಶೇಷಗಳಡಿ ಇನ್ನೂ ಅನೇಕ ಮಂದಿ ಕಾರ್ಮಿಕರು ಸಿಲುಕಿರುವ ಬಲವಾದ ಶಂಕೆ ವ್ಯಕ್ತವಾಗಿದೆ.
ಬೆಳಗ್ಗೆ 9:50ರ ಸುಮಾರಿಗೆ ಚಾವರಿ ಬಜಾರ್ ಮೆಟ್ರೋ ನಿಲ್ದಾಣದ ಸಮೀಪವಿರುವ ಗಾಲಿ ಸಿತಾರಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಟ್ಟಡದ ನಿರ್ಮಾಣ ಕಾರ್ಯ ಮುಂದುವರಿದಿದ್ದ ವೇಳೆ ಈ ಅನಾಹುತ ಸಂಭವಿಸಿದ್ದು, ಕಾರ್ಮಿಕರು ಛಾವಣಿಯ ಕೆಳಗೆ ಕೆಲಸ ಮಾಡುತ್ತಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ದೆಹಲಿ ಅಗ್ನಿಶಾಮಕ ದಳ (DFS), ದೆಹಲಿ ಪೊಲೀಸ್, ಎನ್ಡಿಎಂಸಿ ಹಾಗೂ ಎಂಸಿಡಿ ತಂಡಗಳು ಸ್ಥಳಕ್ಕೆ ಧಾವಿಸಿ ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿವೆ. ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳಡಿಯಿಂದ ಎರಡು ಶವಗಳನ್ನು ಹೊರತೆಗೆದಿದ್ದು, ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸ್ಥಳೀಯರು ತಕ್ಷಣ ಸ್ಪಂದಿಸಿ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಉನ್ನತ ತನಿಖೆಗೆ ಸಿಎಂ ರೇಖಾ ಗುಪ್ತಾ ಆದೇಶ; ಅಧಿಕಾರಿಗಳ ಅಮಾನತು
ಕಟ್ಟಡ ದುರಂತದ ಗಂಭೀರತೆಯನ್ನು ಪರಿಗಣಿಸಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಕೂಡಲೇ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೆ, ನಿರ್ಲಕ್ಷ್ಯ ತೋರಿದ ಗುತ್ತಿಗೆದಾರನ ವಿರುದ್ಧ ಕಠಿಣ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಈ ನಿರ್ಮಾಣ ಕಾಮಗಾರಿಗೆ ಸಂಬಂಧಪಟ್ಟ ಜೂನಿಯರ್ ಇಂಜಿನಿಯರ್ (JE) ಹಾಗೂ ಸಹಾಯಕ ಇಂಜಿನಿಯರ್ (AE) ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸಿಎಂ ಆದೇಶಿಸಿದ್ದಾರೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗುವ ಯಾವುದೇ ಅಧಿಕಾರಿಯ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಗಾಯಗೊಂಡಿರುವ ಎಲ್ಲರಿಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಮೃತರ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಕೂಡಲೇ ಪರಿಹಾರ ಧನವನ್ನು ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿದ್ದೇ ಕಟ್ಟಡ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಭ್ರಷ್ಟಾಚಾರದ ವಾಸನೆ-ತೀವ್ರ ಆಕ್ರೋಶ
ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಎಪಿ (AAP) ನಾಯಕ ಸೌರಭ್ ಭಾರದ್ವಾಜ್, ನಗರದಲ್ಲಿ ಸುರಕ್ಷತಾ ಲೆಕ್ಕಪರಿಶೋಧನೆಗೆ ಪದೇ ಪದೇ ಆದೇಶಿಸಲಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು ಲಂಚ ಪಡೆದು ಕಣ್ಮುಚ್ಚಿ ಕುಳಿತಿವೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿಯಿಂದಾಗಿಯೇ ದೆಹಲಿಯಲ್ಲಿ ಪದೇ ಪದೇ ಕಟ್ಟಡಗಳು ಕುಸಿಯುತ್ತಿದ್ದು, ಅಮಾಯಕರ ಜೀವಗಳು ಬಲಿಯಾಗುತ್ತಿವೆ ಎಂದು ಕಿಡಿಕಾರಿದ್ದಾರೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಜೆಸಿಬಿ ಹಾಗೂ ಅತ್ಯಾಧುನಿಕ ಯಂತ್ರಗಳ ಬಳಕೆಯನ್ನು ಮಾಡಲಾಗುತ್ತಿದೆ.
#DelhiBuildingCollapse #ChawriBazar #DelhiNews #BuildingAccident #CMRekhaGupta #UdayakalaNews


