ಉದಯಕಾಲ ನ್ಯೂಸ್, ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು “ಹಳ್ಳಿ ಗುಗ್ಗು” ಹಾಗೂ “ವಿಲೇಜ್ ಈಡಿಯಟ್” ಎಂದು ಲೇವಡಿ ಮಾಡಿದ್ದ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಹಾಗೂ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆಯವರ ಈ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ನ ಎಲ್ಲಾ ಶಾಸಕರು ಒಟ್ಟಾಗಿ ಪೋಸ್ಟರ್ ಅಭಿಯಾನದ ಮೂಲಕ ತೀವ್ರ ತಿರುಗೇಟು ನೀಡಿದ್ದು, ಗ್ರಾಮೀಣ ಜನರ ಸ್ವಾಭಿಮಾನವನ್ನು ಕೇವಲವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ, “ಭಾರತದ ಆತ್ಮ ಹಳ್ಳಿಗಳಲ್ಲಿದೆ” ಎಂಬ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ಉಲ್ಲೇಖಿಸಿ, “ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಹಳ್ಳಿಗರೆಂದರೆ ಗುಗ್ಗುಗಳಲ್ಲ” ಎಂದು ಸೌಮ್ಯವಾಗಿಯೇ ತಿವಿದಿದ್ದಾರೆ. ಇತ್ತ ಜೆಡಿಎಸ್ ಪಕ್ಷವು ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿ, ಅಧಿಕಾರದ ಮದದಲ್ಲಿ ಆಡಿರುವ ಈ ಮಾತುಗಳು ಇಡೀ ದೇಶದ ಹಳ್ಳಿಗಳ ಮಣ್ಣಿನ ಮಕ್ಕಳಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದೆ.
‘ಇಟಲಿ ಪ್ರಿಯಾಂಕ್ ಖರ್ಗೆ’ ಎಂದು ಜೆಡಿಎಸ್ ತೀವ್ರ ವಾಗ್ದಾಳಿ
ಪ್ರಿಯಾಂಕ್ ಖರ್ಗೆಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್ ಪಕ್ಷವು, “ಮಿಸ್ಟರ್ ಯುಸ್ಲೆಸ್ ಫೆಲೋ, ‘ಇಟಲಿ’ ಪ್ರಿಯಾಂಕ್ ಖರ್ಗೆ ಅವರೇ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಎಂದು ಜರಿಯುವ ಮೂಲಕ ನಿಮ್ಮ ಹೈಟೆಕ್ ಅಹಂಕಾರ ಮತ್ತು ಸಂಸ್ಕಾರವನ್ನು ಪ್ರದರ್ಶಿಸಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡಿದೆ. ದೆಹಲಿ ಮತ್ತು ಇಟಲಿ ನಾಯಕರ ಎದುರು ಗುಲಾಮಗಿರಿ ಮಾಡುವವರಿಗೆ ಹಳ್ಳಿಗರ ಸ್ವಾಭಿಮಾನ ಎಂದಿಗೂ ಅರ್ಥವಾಗುವುದಿಲ್ಲ. ಅಪ್ಪನ ಹೆಸರಿನಲ್ಲಿ ರಾಜಕೀಯಕ್ಕೆ ಬಂದು, ಹೈಕಮಾಂಡ್ ಕೃಪೆಯಿಂದ ಸಚಿವರಾಗಿರುವ ನಿಮಗೆ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ ಮಣ್ಣಿನ ಮಗನ ನೈಜತೆ ‘ಈಡಿಯಟ್’ ತರಹವೇ ಕಾಣುತ್ತದೆ ಎಂದು ವಾಗ್ದಾಳಿ ನಡೆಸಿದೆ.
ಬರೋ ಚುನಾವಣೆಯಲ್ಲಿ ಹಳ್ಳಿಗರೇ ಪಾಠ ಕಲಿಸ್ತಾರೆ : ಜೆಡಿಎಸ್ ಎಚ್ಚರಿಕೆ
ಟ್ವಿಟರ್ ರಾಜಕಾರಣಿಗಳಿಗೆ ಹಳ್ಳಿಯ ಜನರ ಬವಣೆಗಳು ಎಂದಿಗೂ ಅರ್ಥವಾಗುವುದಿಲ್ಲ ಎಂದಿರುವ ಜೆಡಿಎಸ್, “ಹೌದು, ನಾವು ರೈತರ ಪರ ನಿಲ್ಲುವ ಹೆಮ್ಮೆಯ ‘ಹಳ್ಳಿ ಗುಗ್ಗು’ಗಳೇ ಹೊರತು, ಬಣ್ಣ ಬದಲಿಸುವ ನಿನ್ನಂತಹ ‘ಕಾರ್ಪೊರೇಟ್ ಓತಿಕ್ಯಾತ’ಗಳಲ್ಲ” ಎಂದು ತಿರುಗೇಟು ನೀಡಿದೆ. ಎಸಿ ಕೊಠಡಿಯಲ್ಲಿ ಕುಳಿತು ರಾಜಕೀಯ ಮಾಡುವವರಿಗೆ ಮಣ್ಣಿನ ಬೆವರಿನ ಬೆಲೆ ತಿಳಿಯುವುದಿಲ್ಲ. ಆದರೆ, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಹಳ್ಳಿಯ ಮತದಾರರು ನಿಮ್ಮ ಕಪಟ ರಾಜಕಾರಣವನ್ನು ಅರ್ಥಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ತಿಪ್ಪೆಗುಂಡಿಗೆ ಎಸೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಒಟ್ಟಿನಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಜೆಡಿಎಸ್ ನಾಯಕರ ನಡುವಿನ ಈ ಮಾತಿನ ಸಮರವು ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
#PriyankKharge #HDKumaraswamy #JDS #VillageIdiotRow #KarnatakaPolitics #UdayakalaNews

