ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ನಲ್ಲಿ ಕ್ರೇನ್ ಮೂಲಕ ಸಾಗಿಸುತ್ತಿದ್ದ ಕುದಿಯುತ್ತಿದ್ದ ಉಕ್ಕು ಕಾರ್ಮಿಕರ ಮೇಲೆ ಬಿದ್ದು ಕನಿಷ್ಠ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕುದಿದು ಕರಗಿದ ಉಕ್ಕು ಕ್ಯಾಸ್ಟಿಂಗ್ ಕಾರ್ಯಾಚರಣೆ ವೇಳೆ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸಲು ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ. ಅಪಘಾತ ನಡೆದ ಸ್ಥಾವರ ಆವರಣದಲ್ಲಿ ಆತಂಕ ಮನೆ ಮಾಡಿದ್ದು, ಕಾರ್ಮಿಕರು ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದಾರೆ. ಉಕ್ಕು ಸ್ಥಾವರ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಿಸಲು ಪ್ರಯತ್ನ ಪ್ರಾರಂಭಿಸಿದರು. ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಸರ್ಕಲ್ ಇನ್ಸ್‌ಪೆಕ್ಟರ್ ಕೇಶವ್ ರಾವ್ ಪ್ರಕಾರ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಗಾಯಾಳುಗಳನ್ನು ತಕ್ಷಣದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರ ಕುಟುಂಬದ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಉಕ್ಕು ಕಾರ್ಖಾನೆಯೇ ವಹಿಸಿಕೊಳ್ಳಲಿದೆ. ನಿಖರ ಕಾರಣ ತಿಳಿಯಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಘೋಷಿಸಲಾಗಿದೆ.
ಕೇಂದ್ರ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. ಗಾಯಾಳುಗಳಿಗೆ ತಲಾ ₹10 ಲಕ್ಷ ಪರಿಹಾರ ಹಾಗೂ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.


