ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾದ ಯುವತಿ ಯುವಕನನ್ನು ಮದುವೆಯಾಗುವುದಾಗಿ ನಂಬಿಸಿ ಹೂಡಿಕೆ ನೆಪದಲ್ಲಿ 35 ಲಕ್ಷ ರೂಪಾಯಿ ವಂಚಿಸಿದ್ದು, ಬೆಂಗಳೂರು ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿವಾಳ ನಿವಾಸಿ ಅನಿಲ್ ಕುಮಾರ್ ಸಾಗಿನಾಲಾ ಯುವತಿಯ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು. ಅವರ ದೂರಿನನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ್ ಕುಮಾರ್ ವೈವಾಹಿಕ ವೆಬ್‌ಸೈಟ್ ಮೂಲಕ ಮದುವೆಯಾಗಲು ಯುವತಿಯರ ವಿವರ ಹುಡುಕುತ್ತಿದ್ದರು. ವಾಟ್ಸ್‌ಆ್ಯಪ್ ಕಾಲ್ ಮಾಡಿದ್ದ ಯುವತಿಯೊಬ್ಬಳು ಲಕ್ಷ್ಮಿ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದಳು. ಕೆಲವು ದಿನ ಇಬ್ಬರೂ ಫೋನ್‌ನಲ್ಲಿ ಮಾತುಕತೆ ನಡೆಸಿದ್ದರು. ಭವಿಷ್ಯ ದೃಷ್ಟಿಯಿಂದ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದ್ದೇನೆ, ಳಿ ನೀವು ಕೂಡ ಕ್ರಿಪ್ಟೋ/ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಅನಿಲ್‌ಗೆ ಆಮಿಷವೊಡ್ಡಿದ್ದಳು. ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದರೆ ಮದುವೆ ಬಳಿಕ ಅದೇ ಹಣದಲ್ಲಿ ಲೈಫ್ ಸೆಟಲ್ ಆಗಬಹುದು ಎಂದು ಹೇಳಿದ್ದಳು. ಅನಿಲ್ ಈಗ ಬೇಡ ಮದುವೆ ಬಳಿಕ ನೋಡೋಣ ಎಂದಿದ್ದರು.
ಆದರೂ ಆಕೆ ಹಣ ಹೂಡಿಕೆ ಮಾಡುವಂತೆ ಒಪ್ಪಿಸಿದ್ದಳು. ಒತ್ತಡಕ್ಕೆ ಮಣಿದ ಅನಿಲ್ ಆಕೆ ನೀಡಿದ ವೆಬ್‌ಸೈಟ್‌ನಲ್ಲಿ ಆರಂಭದಲ್ಲಿ 60 ಸಾವಿರ ರೂ. ಹೂಡಿಕೆ ಮಾಡಿದ್ದರು. ಬ್ಯಾಂಕ್‌ಗಳಲ್ಲಿ ಲೋನ್ ಪಡೆದು ಹಂ ತಹಂತವಾಗಿ ₹35 ಲಕ್ಷ ಹೂಡಿಕೆ ಮಾಡಿದ್ದರು.
ಲಾಭದ ಹಣ ಪಡೆಯಲು ಹೋದಾಗ ಖಾತೆಯೇ ಡಿಲೀಟ್ ಆಗಿತ್ತು. ನಂಬರ್ ಕೊಟ್ಟಿದ್ದ ಯುವತಿಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಮೋಸ ಹೋಗಿರುವುದು ತಿಳಿದ ಅನಿಲ್ ಠಾಣೆಗೆ ದೂರು ನೀಡಿದ್ದಾರೆ.


