Menu

ಫಿಲಿಪೈನ್ಸ್‌ನಲ್ಲಿ ಭೂಕಂಪಕ್ಕೆ 12 ಮಂದಿ ಬಲಿ, ಸುನಾಮಿ ಎಚ್ಚರಿಕೆ

ಫಿಲಿಪೈನ್ಸ್‌ನ ಮೈಂಡಾನಾವ್ ಪ್ರದೇಶದಲ್ಲಿ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ ೧೨ ಮಂದಿ ಬಲಿಯಾಗಿದ್ದಾರೆ. 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 7:37 ಕ್ಕೆ ಜನರಲ್ ಸ್ಯಾಂಟೋಸ್ ನಗರದ ಸಮೀಪ 13 ಕಿ.ಮೀ. ದೂರ ಸಮುದ್ರದ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಜನರಲ್ ಸ್ಯಾಂಟೋಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ಧರೆಗುರುಳಿವೆ. ಶಾಪಿಂಗ್ ಮಾಲ್‌ಗಳು, ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳು, ಶಾಲಾ ಕಟ್ಟಡಗಳು ಮತ್ತು ಪ್ರಮುಖ ಸೇತುವೆಗಳಿಗೆ ಹಾನಿಯಾಗಿದೆ. ರಸ್ತೆಗಳಲ್ಲಿ ಕಟ್ಟಡಗಳ ಅವಶೇಷಗಳು ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ.

ಭೂಕಂಪದ ತೀವ್ರತೆಯಿಂದಾಗಿ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಫಿಲಿಪೈನ್ಸ್, ಇಂಡೋನೇಷ್ಯಾ, ಮಲೇಷ್ಯಾ, ತೈವಾನ್ ಮತ್ತು ಪಪುವಾ ನ್ಯೂಗಿನಿಯಾದ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ತಗ್ಗು ಪ್ರದೇಶಗಳಲ್ಲಿರುವ ಜನರು ಎತ್ತರದ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಸೂಚನೆ ನೀಡಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಪ್ರಬಲ ಭೂಕಂಪದ ಬಳಿಕ ಸರಣಿ ಕಂಪನಗಳು ಸಂಭವಿಸಿವೆ. ಹೀಗಾಗಿ ಕಟ್ಟಡಗಳ ಒಳಗೆ ಪ್ರವೇಶಿಸಲು ಅಧಿಕಾರಿಗಳು ನಿಷೇಧ ಹೇರಿದ್ದಾರೆ. ವಿಮಾನ ಸಂಚಾರವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೈಂಡಾನಾವ್ ಪ್ರದೇಶದ ಶಾಲೆಗಳು ಮತ್ತು ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

Related Posts

Leave a Reply

Your email address will not be published. Required fields are marked *