Menu

ದಕ್ಷಿಣ ಭಾರತದ ರಾಜ್ಯಗಳ ಕ್ಷೇತ್ರಗಳನ್ನು ಕಡಿಮೆ ಮಾಡುವ ಷಡ್ಯಂತ್ರವನ್ನು ವಿರೋಧಿಸುತ್ತೇವೆ: ಡಿಕೆ ಶಿವಕುಮಾರ್‌

“ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡನೆ ಮಾಡಿತ್ತು. ಮಹಿಳಾ ಮೀಸಲಾತಿಗೆ ನಾವೆಲ್ಲರೂ ಬೆಂಬಲ ನೀಡುತ್ತೇವೆ. ಆದರೆ ಕ್ಷೇತ್ರ ಪುನರ್ ವಿಂಗಡಣೆ ಹೆಸರಿನಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಕ್ಷೇತ್ರಗಳನ್ನು ಕಡಿಮೆ ಮಾಡುವ ಷಡ್ಯಂತ್ರವನ್ನು ನಾವು ವಿರೋಧಿಸುತ್ತೇವೆ. ಕೇಂದ್ರ ಸರ್ಕಾರದ ಈ ನೀತಿ ವಿರುದ್ಧ ಸ್ಟಾಲಿನ್ ಅವರು ಧ್ವನಿ ಎತ್ತಿದ್ದು, ಇಡಿಯಾ ಮೈತ್ರಿಕೂಟದ ಎಲ್ಲಾ ನಾಯಕರು ಸೇರಿ ಈ ಮಸೂದೆಯನ್ನು ಮಣಿಸಿದ್ದೇವೆ. ಇದು ಪ್ರಜಾಪ್ರಭುತ್ವದ ಗೆಲುವಾಗಿದ್ದು, ಇದಕ್ಕಾಗಿ ಹೋರಾಟ ಮಾಡಿದ ತಮಿಳುನಾಡಿನ ಸಂಸದರಿಗೆ ನಾನು ಅಭಿನಂದಿಸುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ತಮಿಳುನಾಡಿನ ಪೊನ್ನೇರಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ  ಅವರು ಮಾತನಾಡಿದರು.“ಈ ದೇಶದ ಭವಿಷ್ಯ ಇಂಡಿಯಾ ಮೈತ್ರಿಕೂಟದ ಜತೆಗಿದೆ. ತಮಿಳುನಾಡಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ಸ್ಟಾಲಿನ್ ಅವರ ನಾಯಕತ್ವದಲ್ಲಿ ತಮಿಳುನಾಡಿನ ಜನರ ಹಿತವನ್ನು ಕಾಪಾಡಲಾಗುವುದು. ಎನ್ಡಿಎ ಹಾಗೂ ಎಐಎಡಿಎಂಕೆ ದುರಾಡಳಿತದಿಂದ ತಮಿಳುನಾಡನ್ನು ರಕ್ಷಣೆ ಮಾಡಿ ಈ ರಾಜ್ಯವನ್ನು ಸಮೃದ್ಧವಾಗಿ ಮುನ್ನಡೆಸಲಾಗುತ್ತಿದೆ. ತಮಿಳುನಾಡು ಈಗ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ನೀವೆಲ್ಲರೂ ಸ್ಟಾಲಿನ್ ಅವರನ್ನು ಮತ್ತೆ  ಮುಖ್ಯಮಂತ್ರಿಯನ್ನಾಗಿ ಮರುಆಯ್ಕೆ ಮಾಡಬೇಕು” ಎಂದು ಕರೆ ನೀಡಿದರು.

“ದೇಶವನ್ನು ಒಗ್ಗೂಡಿಸುವ ಭಾರತ ಜೋಡೋ ಯಾತ್ರೆಯನ್ನು ಮೊದಲು ಉದ್ಘಾಟನೆ ಮಾಡಿದ್ದು ಸ್ಟಾಲಿನ್ ಅವರು. ನಮ್ಮ ಸಹೋದರ ರಾಹುಲ್ ಗಾಂಧಿ ಮುಂದಿನ ಪ್ರಧಾನಮಂತ್ರಿಯಾಗಬೇಕು ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಸ್ಟಾಲಿನ್ ಅವರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದ ತಿಳಿಸುತ್ತೇನೆ. ಕಾಂಗ್ರೆಸ್ ಪಕ್ಷ ದೊಡ್ಡ ಇತಿಹಾಸ ಹೊಂದಿರುವಂತೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಕೂಡ ದೊಡ್ಡ ಇತಿಹಾಸ ಹೊಂದಿದೆ” ಎಂದರು.

“ಮುಂದಿನ ಒಂದು ವಾರದಲ್ಲಿ ತಮಿಳುನಾಡಿನ ವಿಧಾನಸಭೆ ಚುನಾವಣೆ ಮುಕ್ತಾಯಗೊಳ್ಳಲಿದೆ. ಇಡೀ ದೇಶ ನಿಮ್ಮ ತೀರ್ಪಿಗಾಗಿ ಎದುರುನೋಡುತ್ತಿದೆ ಎಂದು ಹೇಳಬಯಸುತ್ತೇನೆ. ನಾನು ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿದ್ದು, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಬಂದಾಗೆಲ್ಲ ಸಮಾಜದ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ” ಎಂದು ತಿಳಿಸಿದರು.

“ಡಿಎಂಕೆ ತಮಿಳುನಾಡಿನ ಸಂಸ್ಕೃತಿ, ಭಾವನೆ ಕಾಪಾಡಿಕೊಂಡು ಬಂದಿದೆ. ಕಾಂಗ್ರೆಸ್ ಹಾಗೂ ಡಿಎಂಕೆ ನಡುವೆ 40 ವರ್ಷಗಳ ಐತಿಹಾಸಿಕ ಮೈತ್ರಿ ಹೊಂದಿದ್ದು, ಈ ಮೈತ್ರಿ ದೇಶ ಹಾಗೂ ತಮಿಳುನಾಡನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಬ್ರಿಟೀಷರು ನೂರಾರು ವರ್ಷಗಳ ಕಾಲ ಈ ದೇಶವನ್ನು ಆಳಿದರು. ನಾವು ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಮಾತೃಭಾಷೆ ಯಾವುದು ಎಂದು ನಮೂದಿಸುತ್ತೇವೆ. ನಾನು ಕರ್ನಾಟಕದವನಾಗಿದ್ದು ನನ್ನ ಮಾತೃಭಾಷೆ ಕನ್ನಡ, ಇದು ತಮಿಳುನಾಡು ನಿಮ್ಮ ಮಾತೃಭಾಷೆ ತಮಿಳು, ಕೇರಳಿಗರ ಮಾತೃಭಾಷೆ ಮಲಯಾಳಂ, ಆಂಧ್ರಪ್ರದೇಶದವರದ್ದು ತೆಲುಗು, ಮಹಾರಾಷ್ಟ್ರದವರದ್ದು ಮರಾಠಿ. ಬ್ರಿಟೀಷರ ಕಾಲದಿಂದಲೂ ಮಾತೃಭಾಷೆಗೆ ಗೌರವ ನೀಡುತ್ತಾ ಬಂದಿದ್ದೇವೆ” ಎಂದು ತಿಳಿಸಿದರು.

“ಬಿಜೆಪಿ ಹಾಗೂ ಎನ್ ಡಿಎ ಸರ್ಕಾರ ನೀವು ನಿಮ್ಮ ಮಾತೃಭಾಷೆ ಮರೆತು ಹಿಂದಿ ಭಾಷೆ ಕಲಿಯಬೇಕು ಎಂದು ಒತ್ತಡ ಹೇರುತ್ತಿದೆ. ನಮ್ಮ ಮಾತೃಭಾಷೆಗೆ ಆಗುವ ಅಗೌರವವನ್ನು ನಾವು ಸಹಿಸುವುದಿಲ್ಲ. ಹೀಗಾಗಿ ಸ್ಟಾಲಿನ ಹಾಗೂ ದಕ್ಷಿಣ ಭಾರತದ ರಾಜ್ಯಗಳ ನಾಯಕರೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

“ಕಳೆದ ಹತ್ತು ದಿನಗಳಿಂದ ತಮಿಳುನಾಡಿನಲ್ಲಿ ನಾನು ಚುನಾವಣಾ ಪ್ರಚಾರ ಮಾಡುತ್ತಿದ್ದು, ನಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇನೆ. ಸ್ಟಾಲಿನ ಅವರ ನೇತೃತ್ವದ ಡಿಎಂಕೆ ಹಾಗೂ ಮೈತ್ರಿ ಪಕ್ಷಗಳ ಸರ್ಕಾರ ಜನಸಾಮಾನ್ಯರ ಹಕ್ಕು, ತಮಿಳುನಾಡಿನ ಹಿತವನ್ನು ರಕ್ಷಣೆ ಮಾಡಿಕೊಂಡು ಬಂದಿದೆ” ಎಂದು ತಿಳಿಸಿದರು.

“ಕರ್ನಾಟಕದಲ್ಲಿ ನಾವು ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ಅಧಿಕಾರಕ್ಕೆ ಬಂದ ನಂತರ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಬಡ ಮಹಿಳೆಯರಿಗೆ ಮಾಸಿಕ 2 ಸಾವಿರ, ಉಚಿತ ಬಸ್ ಪ್ರಯಾಣ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, 10 ಕೆ.ಜಿ ಅಕ್ಕಿ, ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಬಿಜೆಪಿ ಟೀಕಿಸಿದ್ದ ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಾವು ಕೊಟ ಮಾತಿನಂತೆ ನಡೆದು ನಮ್ಮ ಭರವಸೆಗಳಿಗೆ ಬದ್ಧವಾಗಿದ್ದೇವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಸ್ಟಾಲಿನ್ ಅವರು ಸೇರಿ ಮನೆ ಯಜಮಾನಿಗೆ 2 ಸಾವಿರ ಆರ್ಥಿಕ ನೆರವು ನೀಡಲಾಗುವುದು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ಅಗತ್ಯ ವಸ್ತುಗಳ ಖರೀದಿಗೆ 8 ಸಾವಿರ ಮೊತ್ತದ ಕೂಪನ್ ವಿತರಣೆ ಮಾಡಲಾಗುವುದು. ತಮಿಳುನಾಡಿನ ರೈತರಿಗೆ ಮೀಟರ್ ರಹಿತ ಪಂಪ್ ಸೆಟ್ ನೀಡಲಾಗುವುದು.  ರೈತರಿಗೆ ನೀರು ಹಾಗೂ ವಿದ್ಯುತ್ ನೀಡಲಾಗುವುದು. ವಿಕಲಚೇತನರು, ಹಿರಿಯ ನಾಯಕರಿಗೆ 2 ಸಾವಿರ ಪಿಂಚಣಿ ಹೆಚ್ಚಳ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ವಸತಿರಹಿತರಿಗೆ 10 ಲಕ್ಷ ಮನೆಗಳನ್ನು ವಿತರಣೆ ಮಾಡಲು ತೀರ್ಮಾನಿಸಲಾಗಿದೆ.  ಇಂದಿರಾ ಗಾಂಧಿ ಅವರು ನಮಗೆ ಈ ಹಸ್ತದ ಗುರುತು ನೀಡಿದ್ತದು, ತಮಿಳುನಾಡಿನ ಜನ ನಿಮ್ಮ ಕೈಯಿಂದ ಹಸ್ತದ ಗುರುತಿಗೆ ಮತ ಹಾಕಿ. ಈ ಹಸ್ತ ನಿಮ್ಮ ಹಾಗೂ ರಾಜ್ಯದ ಹಿತ ಕಾಪಾಡಲಿದೆ” ಎಂದು ತಿಳಿಸಿದರು.

“ಅನೇಕ ಮಹಾನ್ ನಾಯಕರು ಈ ರಾಜ್ಯವನ್ನು ಆಳಿದ್ದಾರೆ. ಈಗ ಸ್ಟಾಲಿನ್ ಅವರು ಅದನ್ನು ಮಂದುವರಿಸಿಕೊಂಡು ಹೋಗುತ್ತಿದ್ದು, ನಮ್ಮ ಮೈತ್ರಿಕೂಟದ ಎಲ್ಲಾ 20 ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿದ್ದು, ಡಿಎಂಕೆ ನೇತೃತ್ವದ ಈ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ರಾಜ್ಯದ ಭವಿಷ್ಯ ಡಿಎಂಕೆ ಮೈತ್ರಿಕೂಟದ ಜತೆಗಿದ್ದು, ನೀವು ನಿಮ್ಮ ಮತ ನೀಡಿ ಆಶಿರ್ವಾದ ಮಾಡಿ” ಎಂದು ಮನವಿ ಮಾಡಿದರು.

Related Posts

Leave a Reply

Your email address will not be published. Required fields are marked *