ಉದಯಕಾಲ ನ್ಯೂಸ್, ದಾವಣಗೆರೆ: ಸೈಬರ್ ವಂಚಕರು ದಿನಕ್ಕೊಂದು ಹೊಸ ವಂಚನೆಯ ಮಾರ್ಗಗಳನ್ನು ಹುಡುಕುತ್ತಿದ್ದು, ಇದೀಗ ಗ್ಯಾಸ್ ಪೈಪ್ಲೈನ್ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 12.07 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ದಾವಣಗೆರೆಯ ಎಸ್ಎಸ್ ಲೇಔಟ್ ನಿವಾಸಿಯೊಬ್ಬರು ಈ ಸೈಬರ್ ಮೋಸಕ್ಕೆ ಒಳಗಾಗಿದ್ದು, ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಂಚಕರ ವಾಮಮಾರ್ಗ
ಸೈಬರ್ ಕಳ್ಳರು ಮೊದಲು ಸಂತ್ರಸ್ತರ ವಾಟ್ಸ್ಆ್ಯಪ್ (WhatsApp) ಸಂಖ್ಯೆಗೆ ಸಂದೇಶವೊಂದನ್ನು ಕಳುಹಿಸಿ, ತಾವು ಮಹಾನಗರ ಪಾಲಿಕೆ ಗ್ಯಾಸ್ ಏಜೆನ್ಸಿಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದಾರೆ. ನಿಮ್ಮ ಗ್ಯಾಸ್ ಪೈಪ್ಲೈನ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲಾಗುವುದು ಎಂದು ಭಯ ಹುಟ್ಟಿಸಿದ್ದಾರೆ. ವಂಚಕರ ಮಾತನ್ನು ನಂಬಿ ಆತಂಕಗೊಂಡ ವ್ಯಕ್ತಿಯು, ಸಂದೇಶದಲ್ಲಿದ್ದ ನಂಬರ್ಗೆ ಮರುಕರೆ ಮಾಡಿದ್ದಾರೆ.
ಈ ವೇಳೆ ವಂಚಕರು ತಮ್ಮ ಮೊಬೈಲ್ಗೆ ಕಳುಹಿಸಿದ ಎಪಿಕೆ (APK) ಫೈಲ್ ಅನ್ನು ಡೌನ್ಲೋಡ್ ಮಾಡುವಂತೆ ಸೂಚಿಸಿದ್ದಾರೆ. ವಂಚಕರ ಜಾಲದ ಸುಳಿಗೆ ಸಿಲುಕಿದ ವ್ಯಕ್ತಿ ಎಪಿಕೆ ಫೈಲ್ ತೆರೆದ ತಕ್ಷಣವೇ ಅವರ ಮೊಬೈಲ್ಗೆ ಸರಣಿ ಒಟಿಪಿ (OTP) ಬರಲು ಆರಂಭಿಸಿವೆ. ಬಂದ ಒಟಿಪಿ ಸಂಖ್ಯೆಗಳನ್ನು ನಂಬಿಕೆಯಿಂದ ವಂಚಕರಿಗೆ ತಿಳಿಸುತ್ತಿದ್ದಂತೆ, ಕೆಲವೇ ಕ್ಷಣಗಳಲ್ಲಿ ಸಂತ್ರಸ್ತರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ಹಣ ಕಡಿತಗೊಂಡಿದೆ. ಹಣ ಕಡಿತಗೊಂಡ ಬಳಿಕವಷ್ಟೇ ತಮಗೆ ಸೈಬರ್ ವಂಚನೆಯಾಗಿರುವುದು ಅರಿವಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಸಂತ್ರಸ್ತರು ದಾವಣಗೆರೆ ಸಿಇಎನ್ (CEN) ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಡಿವೈಎಸ್ಪಿ ಬಂಕಾಳಿ ನಾಗಪ್ಪ ಎಚ್ಚರಿಕೆ
ಈ ಪ್ರಕರಣದ ಕುರಿತು ಮಾತನಾಡಿರುವ ಸೆನ್ ಠಾಣೆಯ ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರು,ಸೈಬರ್ ವಂಚಕರು ಮಹಾನಗರ ಪಾಲಿಕೆ ಗ್ಯಾಸ್ ಏಜೆನ್ಸಿ ಹೆಸರಿನಲ್ಲಿ ಪೈಪ್ಲೈನ್ ಕಡಿತದ ಬೆದರಿಕೆ ಹಾಕಿ 12 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಸಾರ್ವಜನಿಕರು ಯಾವುದೇ ಅಪರಿಚಿತ ಲಿಂಕ್ಗಳು, ಎಪಿಕೆ ಫೈಲ್ಗಳು ಹಾಗೂ ಒಟಿಪಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
#CyberCrime #DavanagereNews #GasPipelineScam #WhatsAppFraud #APKScam #DavanagerePolice #UdayakalaNews #OnlineFraud

