Thursday, October 29, 2026
Menu

2,500 ರೂ. ಬರ ಪರಿಹಾರ ವಿತರಣೆಗೆ ಮುಂದಾದ ರಾಜ್ಯ ಸರ್ಕಾರ

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ಒಟ್ಟು 226 ತಾಲೂಕುಗಳಲ್ಲಿ ತೀವ್ರ ಬರಗಾಲ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಸಂಕಷ್ಟದಲ್ಲಿರುವ ಅನ್ನದಾತರಿಗೆ ಆಸರೆಯಾಗಲು ರಾಜ್ಯ ಸರ್ಕಾರವು ಘೋಷಿಸಿದ್ದ ತಲಾ 2,500 ರೂ.ಗಳ ಬೆಳೆಹಾನಿ ಪರಿಹಾರವನ್ನು (Drought Relief) ಮುಂದಿನ ಒಂದೂವರೆ ತಿಂಗಳೊಳಗೆ ವಿತರಿಸಲು ಸಜ್ಜಾಗಿದೆ. ಆದರೆ, ಈ ಪರಿಹಾರ ಧನವನ್ನು ಪಡೆದುಕೊಳ್ಳಲು ರೈತರಿಗೆ ಷರತ್ತುಗಳನ್ನು ವಿಧಿಸಿರುವುದು ಪ್ರಸ್ತುತ ವ್ಯಾಪಕ ಚರ್ಚೆಗೆ ಹಾಗೂ ರೈತರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ನಡೆದ ವಿಶೇಷ ಅಧಿವೇಶನದಲ್ಲಿ ಸುಮಾರು 45 ರಿಂದ 50 ಲಕ್ಷ ರೈತರಿಗೆ ತಲಾ 2,500 ರೂ.ಗಳ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ ಬೊಕ್ಕಸದಿಂದ ಅಂದಾಜು 1,250 ಕೋಟಿ ರೂ. ವೆಚ್ಚವಾಗಲಿದೆ. ಆದಾಗ್ಯೂ, ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಸರ್ಕಾರ ಈಗ ಸ್ಪಷ್ಟ ಮಾರ್ಗಸೂಚಿಗಳು ಹಾಗೂ  ನಿಬಂಧನೆಗಳೊಂದಿಗೆ ಹಣ ಬಿಡುಗಡೆ ಮಾಡಲು ಮುಂದಾಗಿದೆ.

ಪರಿಹಾರ ವಿತರಣೆಯ ಮಾನದಂಡಗಳು ಮತ್ತು ಪ್ರಮುಖ ಷರತ್ತುಗಳು

ಬರ ಪರಿಹಾರ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಅರ್ಹ ರೈತರಿಗೆ ಮಾತ್ರ ನೇರವಾಗಿ ಹಣ ತಲುಪಿಸಲು ಇ-ಆಡಳಿತ ಇಲಾಖೆಯ ‘ಫ್ರೂಟ್ಸ್’ (FRUITS) ತಂತ್ರಾಂಶ ಮತ್ತು ಮುಂಗಾರು ಬೆಳೆ ಸಮೀಕ್ಷೆಯ ದತ್ತಾಂಶವನ್ನು ಕಡ್ಡಾಯಗೊಳಿಸಲಾಗಿದೆ. ವಿಶೇಷವಾಗಿ, ತಾಲೂಕಿನಲ್ಲಿ ಅತಿ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರಾರಂಭಿಸಿ ಅತಿ ಹೆಚ್ಚು ಭೂಮಿ ಹೊಂದಿರುವವರ ಕಡೆಗೆ ‘ಆರೋಹಣ ಕ್ರಮದಲ್ಲಿ’ (Ascending Order) ಪರಿಹಾರ ಮೊತ್ತವನ್ನು ಡಿಬಿಟಿ (DBT) ಮೂಲಕ ಜಮೆ ಮಾಡಲಾಗುವುದು. ಇದರೊಂದಿಗೆ, ಮೊದಲು ಮಳೆಯಾಶ್ರಿತ ಬೆಳೆ, ನಂತರ ನೀರಾವರಿ ಬೆಳೆ ಹಾಗೂ ತದನಂತರ ಬಹು ವಾರ್ಷಿಕ ಬೆಳೆ ಬೆಳೆದ ರೈತರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಹತೆ ಪಡೆಯಲು ಬೇಕಾದ ಪ್ರಮುಖ ನಿಯಮಗಳು

* ಫಲಾನುಭವಿ ರೈತರು ಜಮೀನಿಗೆ ಸಂಬಂಧಿಸಿದಂತೆ ಆರ್‌ಟಿಸಿ (RTC) ಮುಂತಾದ ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಮತ್ತು ಬ್ಯಾಂಕ್‌ ಖಾತೆಗೆ ಕಡ್ಡಾಯವಾಗಿ ಆಧಾರ್‌ ಜೋಡಣೆ (Aadhaar Seeding) ಆಗಿರಬೇಕು.
* ವಿವಿಧ ನೀರಾವರಿ ಯೋಜನೆಗಳಡಿ ಈ ಹಿಂದೆ ಭೂಸ್ವಾಧೀನಗೊಂಡ ಜಮೀನುಗಳು ಹಾಗೂ ಕೃಷಿಯೇತರ ಉದ್ದೇಶಕ್ಕಾಗಿ (NA) ಭೂ-ಪರಿವರ್ತನೆಗೊಂಡ ಕೃಷಿ ಜಮೀನುಗಳಿಗೆ ಯಾವುದೇ ಪರಿಹಾರ ಅನ್ವಯಿಸುವುದಿಲ್ಲ.
* ಜಂಟಿ ಖಾತೆದಾರರಾಗಿದ್ದಲ್ಲಿ ನೊಂದಾಯಿತ ವಿಸ್ತೀರ್ಣಕ್ಕೆ ತಕ್ಕಂತೆ ಮಾತ್ರ ಪರಿಹಾರ ಸಿಗಲಿದೆ. ಅಲ್ಲದೆ, ಒಬ್ಬ ರೈತರಿಗೆ ಒಂದಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ಜಮೀನಿದ್ದರೂ ಒಟ್ಟು ಗರಿಷ್ಠ 2 ಹೆಕ್ಟೇರ್‌ ವಿಸ್ತೀರ್ಣಕ್ಕೆ ಮಾತ್ರ ಪರಿಹಾರ ಮಿತಿ ಇರಲಿದೆ.
* RTC ಹಾಗೂ ಆಧಾರ್‌ಗಳಲ್ಲಿ ಹೆಸರಿನಲ್ಲಿ ವ್ಯತ್ಯಾಸವಿದ್ದಲ್ಲಿ ಅಥವಾ ವಿಸ್ತೀರ್ಣದಲ್ಲಿ ವ್ಯತ್ಯಾಸವಿದ್ದಲ್ಲಿ ಸ್ಥಳೀಯ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ದೃಢೀಕರಿಸಿಕೊಳ್ಳುವ ನಿಯಮಗಳನ್ನು ರೂಪಿಸಲಾಗಿದೆ. ಸರ್ಕಾರದ ಈ ಕಠಿಣ ಷರತ್ತುಗಳ ನಡುವೆಯೂ ಅರ್ಹ ರೈತರಿಗೆ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಹಣ ತಲುಪಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

#DroughtRelief #KarnatakaGovernment #FarmersWelfare #FruitsSoftware #UdayakalaNews #KarnatakaNews #AgricultureUpdates

Related Posts

Leave a Reply

Your email address will not be published. Required fields are marked *