ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ. ಅವರಿಗೆ ಆಪ್ತರಾಗಿದ್ದ ನಾಗೇಂದ್ರ, ರಾಜಣ್ಣ ಮನೆಗೆ ಹೋಗಿದ್ದಾರೆ. ಈ ಜಮೀರ್ ಅಹ್ಮದ್ ಅವರ ಸರದಿ ಬಂದಿದ್ದು, ಅವರನ್ನು ಮನೆಗೆ ಕಳುಹಿಸಲು ಪ್ಲಾನ್ ನಡೆದಿದೆ. ಅಬ್ದುಲ್ ಜಬ್ಬಾರ್‌ಗೆ ಈಗಾಗಲೇ ಗೇಟ್‌ಪಾಸ್ ಸಿಕ್ಕಿದೆ. ಸಿದ್ದರಾಮಯ್ಯನವರ ತಂಡದವರನ್ನು ಡಿಕೆ ಶಿವಕುಮಾರ್ ಹುಡುಕಿ ಹುಡುಕಿ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಬೆಂಬಲಿಸಿದರೆ ಉಳಿಗಾಲವಿಲ್ಲ ಎಂಬ ಸಂದೇಶ ನೀಡಲಾಗುತ್ತಿದೆ. ಸಿದ್ದರಾಮಯ್ಯ ತಂಡದವರು ಸಣ್ಣ ಇಲಿಗಳನ್ನು ಹೊಡೆದರೆ, ಡಿಕೆಶಿವಕುಮಾರ್ ತಂಡ ದೊಡ್ಡ ಹುಲಿಗಳನ್ನು ಹೊಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ವಿನಯ್ ಕುಲಕರ್ಣಿ ಮಾಡಿಸಿದ ಕೊಲೆ ಪ್ರಕರಣದಲ್ಲಿ, ಎಲ್ಲ ಸಾಕ್ಷಿಗಳು ಲಭ್ಯವಾಗಿವೆ. ಡಿಕೆಶಿವಕುಮಾರ್ ಸಿಎಂ ಆಗಲು ಎಲ್ಲ ಶಾಸಕರನ್ನು ಓಲೈಸುವ ಪ್ರಯತ್ನ ಮಾಡುತ್ತಿರುವುದರಿಂದ ಅವರಿಗೆ ಬೆಂಬಲಿಸಿ ಮಾತಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಬಂದ ತೀರ್ಪು ನ್ಯಾಯಸಮ್ಮತವಾಗಿದೆ. ರಾಜಕೀಯದಲ್ಲಿ ಕೊಲೆ ಮಾಡಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ವಿಚಾರದಲ್ಲಿ ಎಲ್ಲ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು ಎಂದರು.
ನಾರಿ ಶಕ್ತಿ ವಂದನಾ ಅಧಿನಿಯಮವನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ಮಹಿಳಾ ವಿರೋಧಿ ನಿಲುವನ್ನು ಸ್ಪಷ್ಟಪಡಿಸಿದೆ. ಇದನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ. ಆದ್ದರಿಂದ ಇನ್ನು ಕಾಂಗ್ರೆಸ್‌ನ ಮಹಿಳಾ ಘಟಕವನ್ನು ರದ್ದು ಮಾಡುವುದು ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಮಹಿಳೆಯರಿಗೆ ಸಂವಿಧಾನದತ್ತವಾದ ಹಕ್ಕನ್ನು ನೀಡುವ ನಾರಿ ಶಕ್ತಿ ವಂದನಾ ಅಧಿನಿಯಮ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಂದರೂ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸೋಲಿಸಿವೆ. ಮಹಿಳಾ ಸಬಲೀಕರಣದ ಮಸೂದೆ ವಿಫಲವಾಗಿರುವುದು ವಿರೋಧ ಪಕ್ಷಗಳ ಪಿತೂರಿ, ನಿರ್ಲಕ್ಷ್ಯ ಹಾಗೂ ಮಹಿಳಾ ವಿರೋಧಿ ನಿಲುವಿನ ಸ್ಪಷ್ಟ ಸಂಕೇತ. ಮಹಿಳೆಯರ ಹಕ್ಕುಗಳ ಬಗ್ಗೆ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರು ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸೋತಿದ್ದಾರೆ. ಈ ಮಸೂದೆಗೆ ಮತ ನೀಡಿಲ್ಲವೆಂದರೆ ಕಾಂಗ್ರೆಸ್‌ನ ಮಹಿಳಾ ಘಟಕವನ್ನು ರದ್ದು ಮಾಡುವುದು ಸೂಕ್ತ. ಮಹಿಳಾ ಮುಖಂಡರು ಶಾಸನಸಭೆಗೆ ಹೋಗಬಹುದೆಂದು ಕನಸು ಕಂಡಿದ್ದರು. ಮಹಿಳೆಯರ ಹಕ್ಕನ್ನು ನಿರ್ಲಕ್ಷಿಸುವ ಕಾಂಗ್ರೆಸ್ ಸರ್ಕಾರವನ್ನು ಜನರು ಕ್ಷಮಿಸುವುದಿಲ್ಲ. ಕಾಂಗ್ರೆಸ್‌ಗೆ ಮಹಿಳೆಯರು ಎಂದರೆ ಕೇವಲ ಮತ ನೀಡುವವರಾಗಿದ್ದಾರೆ ಎಂದು ಟೀಕಿಸಿದರು.
60 ವರ್ಷ ಆಡಳಿತ ನಡೆಸಿದ ನೆಹರು, ಇಂದಿರಾಗಾಂಧಿ ಮಹಿಳಾ ಮೀಸಲು ತರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮಸೂದೆ ತಂದಾಗ ಅದನ್ನು ವಿರೋಧಿಸಿ ಕಾಂಗ್ರೆಸ್‌ನವರು ಮಹಿಳೆಯರಿಗೆ ದ್ರೋಹ ಮಾಡಿದ್ದಾರೆ. ಮಹಿಳೆಯರಿಗೆ 2,000 ರೂ. ಹಾಗೂ ಉಚಿತ ಬಸ್ ನೀಡಿದರೆ ಸಾಕು, ಅವರಿಗೆ ರಾಜಕೀಯ ಪ್ರಾತಿನಿಧ್ಯ ಬೇಡ ಎಂದು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ತೀರ್ಮಾನಿಸಿದೆ. ಮುಂದಿನ ಚುನಾವಣೆಯಲ್ಲಿ ಇನ್ನಷ್ಟು ಹಣ ಕೊಟ್ಟು ಮತ ಪಡೆದರೆ ಸಾಕು ಎಂದುಅಂದುಕೊಂಡಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಮಹಿಳೆಯರು ಇವರೆಲ್ಲರಿಗೂ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಟ್ಟು 129 ಸಂಸತ್ ಸ್ಥಾನಗಳಿದ್ದು, ಅದನ್ನು 195 ಕ್ಕೆ ಏರಿಸುವ ಅವಕಾಶವಿತ್ತು. ಕ್ಷೇತ್ರ ಮರುವಿಂಗಡಣೆ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಚರ್ಚೆ ಮಾಡಬಹುದಿತ್ತು. ಈ ಹಿಂದೆಯೂ ಮರುವಿಂಗಡಣೆ ಪ್ರಕ್ರಿಯೆ ನಡೆದಿತ್ತು. ಆಗ ಬಾಯಿಗೆ ಬಟ್ಟೆ ತುರುಕಿಕೊಂಡಿದ್ದ ಕಾಂಗ್ರೆಸ್‌ನವರು ಈಗ ಮಾತ್ರ ವಿರೋಧಿಸುತ್ತಿದ್ದಾರೆ. ಕ್ಷೇತ್ರ ಮರುವಿಂಗಡಣೆ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಅದನ್ನು ಕೇಂದ್ರ ಸರ್ಕಾರ ಮಾಡಿದೆ. ಮಹಿಳೆಯರು ಇದನ್ನು ವಿರೋಧಿಸಿ ಕಾಂಗ್ರೆಸ್‌ಗೆ ಹಾದಿಬೀದಿಗಳಲ್ಲಿ ಪ್ರಶ್ನೆ ಮಾಡಬೇಕು. ಕಾಂಗ್ರೆಸ್‌ನ್ನು ದೇಶದಿಂದ ಓಡಿಸುವ ಕೆಲಸವನ್ನು ಮಹಿಳೆಯರು ಮಾಡಲಿದ್ದಾರೆ. ಹಿಂದೆ ತ್ರಿವಳಿ ತಲಾಖ್ ರದ್ದು ಮಾಡಿದಾಗಲೂ ಕಾಂಗ್ರೆಸ್ ವಿರೋಧ ಮಾಡಿತ್ತು. ಮಹಿಳೆಯರ ಪಾಲಿಗೆ ಇದು ಕರಾಳ ದಿನ . ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೂ ಸಂಸತ್ ಸ್ಥಾನಗಳು ಹೆಚ್ಚಲಿವೆ ಎಂದರು.
ಜಿಬಿಎ ರಚನೆಗೆ ಕಾಂಗ್ರೆಸ್ ಸರ್ಕಾರ ಯಾವ ಮಾನದಂಡ ಮಾಡಿದೆ? ಅಲ್ಲಿ ಕೂಡ 2011 ರ ಜನಗಣತಿಯನ್ನೇ ಪರಿಗಣಿಸಲಾಗಿದೆ. ಆದರೆ ಬಿಜೆಪಿ ಅದನ್ನು ಮಾನದಂಡವಾಗಿ ಪರಿಗಣಿಸಿದರೆ ಅದನ್ನು ವಿರೋಧಿಸುತ್ತಾರೆ. ಸಿದ್ದರಾಮಯ್ಯ ಬಜೆಟ್ ಬಳಿಕ ಕುತಂತ್ರಿ ಬುದ್ದಿ ತೋರಿಸಿದ್ದಾರೆ. ಗೃಹಬಳಕೆ ವಿದ್ಯುತ್ ದರವನ್ನು 65 ಪೈಸೆ ಹೆಚ್ಚಿಸಲಾಗಿದೆ. ಕಳೆದ ಸಲ 25 ಬೆಲೆ ಏರಿಕೆಗಳನ್ನು ಮಾಡಿ ಸುಮಾರು 65,000 ಕೋಟಿ ರೂ. ಹೆಚ್ಚುವರಿ ತೆರಿಗೆ ವಸೂಲಿ ಮಾಡಿದ್ದರು. ಜಿಬಿಎ ಚುನಾವಣೆಗೆ ಮುನ್ನ ಇನ್ನಷ್ಟು ತೆರಿಗೆಗಳ ಹೇರಿಕೆಯಾಗಲಿದೆ. ನೌಕರರಿಗೆ ಸಂಬಳ ಕೊಡಲು ಕೂಡ ಸರ್ಕಾರದ ಬಳಿ ಹಣವಿಲ್ಲ. ಅನಾಥ ಮಕ್ಕಳಿಗೆ ಪ್ರೋತ್ಸಾಹಧನ, ಗುತ್ತಿಗೆದಾರರ ಬಿಲ್, ಅಂಗನವಾಡಿ ಸಹಾಯಕರ ಗೌರವಧನ ಹೆಚ್ಚಳ ಮೊದಲಾದವುಗಳಿಗೆ ಹಣವಿಲ್ಲ. 2,000 ರೂ. ನೀಡಿ 22,000 ರೂ. ವಸೂಲಿ ಮಾಡುತ್ತಾರೆ. ಇದರ ಬಗ್ಗೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಲೆಕ್ಕ ಕೊಡುತ್ತೇನೆ ಎಂದು ಅಶೋಕ ತಿಳಿಸಿದರು.
ಜಿಬಿಎ ಚುನಾವಣೆ ಗೆಲ್ಲುವುದಿಲ್ಲವೆಂದು ಕಾಂಗ್ರೆಸ್‌ಗೆ ಗೊತ್ತಾಗಿರುವುದರಿಂದಲೇ ಚುನಾವಣೆ ನಡೆಸುತ್ತಿಲ್ಲ. ಮಾರ್ಗಸೂಚಿ ದರ, ಕಸ ಶುಲ್ಕ, ಪ್ರಮಾಣಪತ್ರಗಳ ಶುಲ್ಕಗಳನ್ನು ಏರಿಸಲಾಗಿದೆ. ಆದ್ದರಿಂದಲೇ ಸೋಲುವ ಭಯ ಅವರಲ್ಲಿದೆ. ಸದ್ಯಕ್ಕಂತೂ ಚುನಾವಣೆ ಮಾಡುವುದಿಲ್ಲ ಎಂದರು.


