Wednesday, September 23, 2026
Menu

ಕೇಂದ್ರದಿಂದ ನಮ್ಮ ಪಾಲನ್ನು ಕೇಳುತ್ತಿದ್ದೇವೆ, ಗೋಗರೆಯುತ್ತಿಲ್ಲ: ಎನ್‌. ರವಿಕುಮಾರ್‌ಗೆ ಸಚಿವ ಲಾಡ್‌ ತಿರುಗೇಟು

ಬರ ಪರಿಹಾರಕ್ಕೆ ಕೇಂದ್ರ ಹಣ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಗೋಗರೆಯುತ್ತಿದೆ ಎಂದು ಹೇಳಿದ ಸದಸ್ಯ ಎನ್‌.ರವಿ ಕುಮಾರ್‌ ಮಾತಿಗೆ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್‌ ಎಸ್‌. ಲಾಡ್‌ ನೀಡಿದ ಪ್ರತ್ಯುತ್ತರಕ್ಕೆ ರವಿಕುಮಾರ್ ಆದಿಯಾಗಿ ಬಿಜೆಪಿ ನಾಯಕರು ತಬ್ಬಿಬ್ಬಾದ ಪ್ರಸಂಗ ವಿಧಾನ ಪರಿಷತ್ ನಲ್ಲಿ ನಡೆಯಿತು.

ವಿಧಾನ ಪರಿಷತ್‌ನಲ್ಲಿ ಚರ್ಚೆ ವೇಳೆ ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಒಂದು ಪೈಸೆಯನ್ನೂ ನೀಡಿಲ್ಲ. ಕೇಂದ್ರ ಹಣ ನೀಡಲಿ ಎಂದು ರಾಜ್ಯ ಸರ್ಕಾರ ಗೋಗೆರೆಯುತ್ತಿದೆ ಎಂದು ರವಿ ಕುಮಾರ್‌  ಹೇಳಿದರು. ಪ್ರತ್ಯುತ್ತರ ನೀಡಿದ ಲಾಡ್‌ ಅವರು, ಗೋಗರೆಯುತ್ತದೆ ಎಂಬ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಕೋಟ್ಯಂತರ ಹಣ ಹೋಗುತ್ತೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಕೇಳುತ್ತಿದೆ. ರಾಜ್ಯಕ್ಕೆ ಕೇಂದ್ರದಿಂದ ಹಣ ಕೇಳಲು ಅಧಿಕಾರ ಇದೆ. ನಾಲ್ಕೂವರೆ ಲಕ್ಷ ಕೋಟಿ ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಹೋಗುತ್ತಿದೆ ಎಂದು ವಿವರಿಸಿದರು.

ನಮ್ಮ ದುಡ್ಡನ್ನು ನಾವು ಕೇಳುತ್ತಿದ್ದೇವೆ. ಇದರಲ್ಲಿ ಗೋಗರೆಯುವ ಮಾತಿಲ್ಲ. ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಿಗೆ ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಹಣ ನೀಡುತ್ತಿದೆ ಎಂಬುದೂ ಇಲ್ಲಿ ಚರ್ಚೆಯಾಗಲಿ ಎಂದು ಲಾಡ್‌  ಪಟ್ಟು ಹಿಡಿದರು. ಲಾಡ್‌ ಪ್ರತಿಕ್ರಿಯೆಯಿಂದ ವಿಚಲಿತರಾದ ರವಿಕುಮಾರ್‌  ಮಾತು ಮುಂದುವರಿಸಿದರು. ಅದಕ್ಕೆ ಅವಕಾಶ ನೀಡದ ಲಾಡ್‌, ಕೇಂದ್ರ ಸರ್ಕಾರ ಗುಜರಾತ್‌, ಮಧ್ಯಪ್ರದೇಶಕ್ಕೆ ಎಷ್ಟು ಹಣ ನೀಡಿದೆ ಎಂದು ಹೇಳಲೇ ಎಂದು ಪ್ರಶ್ನೆ ಹಾಕಿದರು. ನಾವು ನಾಲ್ಕೂವರೆ ಲಕ್ಷ ಕೋಟಿ ಹಣ ಕೇಂದ್ರಕ್ಕೆ ನೀಡುತ್ತೇವೆ ಅದರಲ್ಲಿ ಪಾಲು ಕೇಳುತ್ತೇವೆ. ಅದನ್ನು ವಾಪಸ್‌ ಕೊಡಲ್ಲ ಎಂದರೆ ಹೇಗೆ ಎಂದು ಲಾಡ್‌ ಪ್ರಶ್ನಿಸಿದರು.

ಸಚಿವ ಲಾಡ್‌ ಅವರ ಪ್ರತಿಕ್ರಿಯೆಗೆ ಬೆಂಬಲ ಸೂಚಿಸಿದ ಸಾರಿಗೆ ಸಚಿವ ಬೈರತಿ ಸುರೇಶ್‌ , ನಮ್ಮ ಪಾಲು ಕೇಳುತ್ತಿದ್ದೇವೆ. ಇದು ಫೆಡರಲ್‌ ವ್ಯವಸ್ಥೆ. ಇಲ್ಲಿ ರಾಜ್ಯಗಳು ಪಾಲು ಕೇಳುವ ಅಧಿಕಾರ ಇದೆ. ಗೋಗರೆಯುವ ಪದ ಸರಿಯಲ್ಲ ಎಂದರು. ಗೋಗರೆಯುವ ಪದ ಬಳಕೆ ಸರಿಯಲ್ಲ ಎಂಬ ಲಾಡ್‌ ಅವರ ವಾದಕ್ಕೆ ಹಲವು ಸದಸ್ಯರು ಬೆಂಬಲ ಸೂಚಿಸಿದರು. ಬರ ಪರಿಹಾರಕ್ಕೆ ರಾಜ್ಯ ಈಗಲೇ ಕೇಳಬೇಕು. ಮೊದಲೇ ಕೇಳಲು ಬರುವುದಿಲ್ಲ. ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಬಹುದು ಎಂದು ಲಾಡ್‌  ಹೇಳಿದರು.

ಬಿಜೆಪಿಯವರು ಯಾವಾಗಲೂ ಕಾಂಗ್ರೆಸ್‌ ವಿರುದ್ಧವೇ ಮಾತನಾಡುತ್ತಾರೆ. ಈ ಸದನದಲ್ಲಿ ಯಾವಾಗಲೂ ಹೀಗೆ ಮಾತನಾಡುತ್ತೀರಿ. ನಾವು ಕೇಂದ್ರದ ಬಗ್ಗೆ ಮಾತನಾಡಿದರೆ ನಮ್ಮ ಮೇಲೆ ಮುಗಿಬೀಳುತ್ತೀರಿ. ನೀವು ಬೈಯಿರಿ. ಕಾಂಗ್ರೆಸ್‌ ವಿರುದ್ಧ ಮಾತನಾಡಿ. ಆದರೆ ಒಂದು ತಿಳಿಯಿರಿ, ಕೇಂದ್ರ ಸರ್ಕಾರ ನಡೆಯುವುದು ರಾಜ್ಯಗಳ ಹಣದಿಂದ. ಎಲ್ಲ ರಾಜ್ಯದಿಂದ ಕೇಂದ್ರಕ್ಕೆ ಹಣ ಹೋಗುತ್ತೆ ಎಂದು ಲಾಡ್‌  ವಿವರಿಸಿದರು.

Related Posts

Leave a Reply

Your email address will not be published. Required fields are marked *