ಉದಯಕಾಲ ನ್ಯೂಸ್, ಬೆಂಗಳೂರು: ಭೂಮಿ ಅಕ್ರಮ ಮಂಜೂರಾತಿ ಹಾಗೂ ಕೋಮುಲ್ (KOMUL) ನೇಮಕಾತಿ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಇಸಿಐಆರ್ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಭೂ ಮಂಜೂರಾತಿ ಮತ್ತು ಕೋಮುಲ್ ನೇಮಕಾತಿ ಅಕ್ರಮ ಆರೋಪ
ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರ ಮೇಲೆ ಈ ಹಿಂದೆ ಭೂಮಿ ಅಕ್ರಮ ಮಂಜೂರಾತಿ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಮೂಲ ಪ್ರಕರಣವನ್ನು ಆಧರಿಸಿ ಜಾರಿ ನಿರ್ದೇಶನಾಲಯವು ನಂಜೇಗೌಡರ ವಿರುದ್ಧ ಇಸಿಐಆರ್ ದಾಖಲಿಸಿಕೊಂಡು ಅವರ ಮನೆ ಮೇಲೆ ದಾಳಿ ನಡೆಸಿತ್ತು. ತದನಂತರ, 2023ರಲ್ಲಿ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ (ಕೋಮುಲ್) ನೇಮಕಾತಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಹಾಗೂ ಇದರಲ್ಲಿ ನಂಜೇಗೌಡರು ಭಾಗಿಯಾಗಿದ್ದಾರೆ ಎಂದು ಆರೋಪಿಸಿತ್ತು.
ಈ ಕುರಿತು ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಬೇಕು ಎಂದು ಕೋರಿ ಇಡಿಯು 2024ರ ಸೆಪ್ಟೆಂಬರ್ 11ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿತ್ತು. ಇಡಿಯ ಈ ಕ್ರಮವನ್ನು ಪ್ರಶ್ನಿಸಿ ಶಾಸಕ ಕೆ.ವೈ. ನಂಜೇಗೌಡ ಅವರು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಆದೇಶ
ಶಾಸಕರ ಪರವಾಗಿ ಹೈಕೋರ್ಟ್ನಲ್ಲಿ ಹಿರಿಯ ವಕೀಲ ಕಿರಣ್ ಜವಳಿ ಹಾಗೂ ಸಿ.ಆರ್. ಮಹೇಂದ್ರ ಗೌಡ ವಾದ ಮಂಡಿಸಿದರು. ವಿಚಾರಣೆ ವೇಳೆ, ಅಕ್ರಮ ಭೂ ಮಂಜೂರಾತಿ ಸಂಬಂಧ ಪೊಲೀಸರು ದಾಖಲಿಸಿದ್ದ ಮೂಲ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ (B Report) ಸಲ್ಲಿಸಿದ್ದು, ವಿಚಾರಣಾ ನ್ಯಾಯಾಲಯವು ಅದನ್ನು ಅಂಗೀಕರಿಸಿದೆ. ಅಲ್ಲದೆ, ಮೂಲ ಪ್ರಕರಣವೇ ಇಲ್ಲದಿರುವಾಗ ಕೋಮುಲ್ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಖಾಸಗಿ ದೂರು ದಾಖಲಿಸಲು ಜಾರಿ ನಿರ್ದೇಶನಾಲಯಕ್ಕೆ ಯಾವುದೇ ಕಾನೂನುಬದ್ಧ ಅಧಿಕಾರ ವ್ಯಾಪ್ತಿಯಿಲ್ಲ ಎಂದು ವಾದ ಮಂಡಿಸಿದ್ದರು.
ಅರ್ಜಿದಾರರ ಪರ ವಕೀಲರ ಈ ಬಲವಾದ ವಾದವನ್ನು ಸಂಪೂರ್ಣವಾಗಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ, ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಇಡಿ ದಾಖಲಿಸಿದ್ದ ಇಸಿಐಆರ್ ಮತ್ತು ಖಾಸಗಿ ದೂರನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಹೈಕೋರ್ಟ್ನ ಈ ಆದೇಶದಿಂದ ಶಾಸಕ ನಂಜೇಗೌಡರಿಗೆ ದೊಡ್ಡ ಮಟ್ಟದ ಕಾನೂನು ರಿಲೀಫ್ ಸಿಕ್ಕಂತಾಗಿದೆ.
#KYNanjegowda #MalurMLA #KarnatakaHighCourt #EDCase #KOMULScam #Congress #UdayakalaNews #LegalNews

