Tuesday, September 22, 2026
Menu

ಕಸ್ತೂರಿ ರಂಗನ್‌ ವರದಿ: ಲೋಪಗಳ ಸರಿಪಡಿಸಲು ಉನ್ನತ ಸಮಿತಿ ರಚನೆ ಘೋಷಿಸಿದ ಸಿಎಂ

ಕಸ್ತೂರಿ ರಂಗನ್ ವರದಿಯಲ್ಲಿನ ಲೋಪಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಿದೆ ಎಂದು ಸಿಎಂ ಡಿಕೆ ಶಿವಕುಮಾರ್​​ ಘೋಷಿಸಿದ್ದಾರೆ.

ವರದಿ ಕುರಿತು ಕೇಂದ್ರ ಸರ್ಕಾರದ 7ನೇ ಕರಡು ಅಧಿಸೂಚನೆಯನ್ನು ಈಗ ಇರುವ ರೀತಿ ಒಪ್ಪಲಾಗದು, ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ರಚಿಸಿ ಭೌತಿಕ ಸರ್ವೆಗೆ ಒಂದು ವರ್ಷದ ಅವಕಾಶ ಕೋರಿ ಕರ್ನಾಟಕ ಸರ್ಕಾರ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ರಾಜ್ಯ ಸರ್ಕಾರದ ಈ ನಿರ್ಣಯವನ್ನು ಪ್ರತಿಪಕ್ಷಗಳೂ ಬೆಂಬಲಿಸಿವೆ.

ಪಶ್ಚಿಮ ಘಟ್ಟ ಅರಣ್ಯ ಭೌತಿಕ ಸಮೀಕ್ಷೆ ನಡೆಸುವಂತೆ ಮತ್ತು ಜನವಸತಿ, ಕೃಷಿ ಪ್ರದೇಶಗಳನ್ನು ಕೈ ಬಿಡುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಳ್ಳಲು ವಿಶೇಷ ಅಧಿವೇಶದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಸರ್ಕಾರ ಹೊರಡಿಸಿದ ಕಸ್ತೂರಿ ರಂಗನ್ ವರದಿ 7 ನೇ ಅಧಿಸೂಚನೆ ವಿರೋಧಿಸಿ ಮಲೆನಾಡು ಭಾಗದಲ್ಲಿ ತೀವ್ರ ಹೋರಾಟ ರೂಪುಗೊಂಡಿದ್ದು, ಈಗ ಹೋರಾಟಕ್ಕೆ ಪ್ರತಿಫಲ ದೊರೆತಂತಾಗಿದೆ.

ಯಥಾವತ್ತಾಗಿ 7ನೇ ಅಧಿಸೂಚನೆ ಒಪ್ಪಿರುವುದಿಲ್ಲ, ವರದಿಯ ನ್ಯೂನ್ಯತೆಗಳನ್ನು ಸರಿಪಡಿಸಬೇಕು, ಇಎಸ್ಎ ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶ, ಇತರೆ ಅರಣ್ಯಪ್ರದೇಶ ಮಾತ್ರ ಸೇರಿಸಬೇಕು. ಕೃಷಿ ಭೂಮಿ, ತೋಟ, ಜನವಸತಿ ಭೂಮಿ ಸೇರಿಸಬಾರದು, ಬಗರ ಹುಕುಂ, ಅರಣ್ಯ ಹಕ್ಕು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ, ನ್ಯಾಯಾಂಗ ಪ್ರಕರಣ ಪರಿಗಣಿಸಬೇಕು, ಭೌತಿಕವಾಗಿ ಸರ್ವೇ ಮಾಡಿ ಗುರುತಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರಿಂದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಂದಾಯ ಅಧಿಕಾರಿಗಳು, ರೈತ ಪ್ರತಿನಿಧಿ, ಕೈಗಾರಿಕಾ ಉದ್ಯಮ ಪ್ರತಿನಿಧಿ, ವಿಷಯ ಪರಿಣಿತರು, ಶೈಕ್ಷಣಿಕ ತಜ್ಞರು, ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ರಚನೆ
ಭೌತಿಕ ಸರ್ವೇ ಸೇರಿದಂತೆ ಕಸ್ತೂರಿ ರಂಗನ್ ವರದಿಯ ನ್ಯೂನ್ಯತೆ ಸರಿಪಡಿಸಲು ವರ್ಷದ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಬಾರದು ಮತ್ತು ರಾಜ್ಯ ಸರ್ಕಾರದ ವಿಷಯದ ಬಗ್ಗೆ ಚರ್ಚೆ ನಡೆಸಿಯೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕಸ್ತೂರಿ‌ ರಂಗನ್ ವರದಿ ಕುರಿತು ರಾಜ್ಯ ಸರ್ಕಾರದ ನಿರ್ಣಯಕ್ಕೆ ಆರ್​​. ಅಶೋಕ್ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ನಾವು ಯಾವುದೇ ರಾಜಕಾರಣ ಬೆರೆಸುವುದಿಲ್ಲ. ನಾವೆಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಕೊಡುತ್ತೇವೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಜೆಡಿಎಸ್ ಕೂಡ ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದು, ಪಕ್ಷಾತೀತವಾಗಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಗಿದೆ. ವರದಿಗೆ ಸಂಬಂಧಿಸಿದಂತೆ ಕೇರಳ ಮಾದರಿ ಅನುಸರಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಕೇಂದ್ರದ ಮನವೊಲಿಸಲು ಸರ್ವಪಕ್ಷಗಳ ನಿಯೋಗ ತೆರಳುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *