Saturday, October 10, 2026
Menu

326 ಕೇಂದ್ರಗಳಲ್ಲಿ ನಾಳೆ ಕೆ-ಸೆಟ್ ಪರೀಕ್ಷೆ: 1.29 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ!

ಉದಯಕಾಲ ನ್ಯೂಸ್‌, ಬೆಂಗಳೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಪ್ರಸ್ತುತ ಸಾಲಿನ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಅಕ್ಟೋಬರ್ 11ರಂದು ರಾಜ್ಯಾದ್ಯಂತ ನಡೆಯಲಿದೆ. ಒಟ್ಟು 37 ವಿವಿಧ ವಿಷಯಗಳಿಗೆ ನಡೆಯಲಿರುವ ಈ ಪರೀಕ್ಷೆಗೆ 1,29,212 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯದ 11 ಜಿಲ್ಲೆಗಳ ಒಟ್ಟು 326 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

 ಬೆಂಗಳೂರಿನಲ್ಲಿ 37 ವಿಷಯಗಳ ಪರೀಕ್ಷೆ

ಬೆಂಗಳೂರಿನಲ್ಲಿ ಮಾತ್ರ ಎಲ್ಲಾ 37 ವಿಷಯಗಳ ಪರೀಕ್ಷೆ ನಡೆಯಲಿದ್ದು, ಉಳಿದ ಜಿಲ್ಲಾ ಕೇಂದ್ರಗಳಲ್ಲಿ 13 ಪ್ರಮುಖ ವಿಷಯಗಳ ಪರೀಕ್ಷೆಗಳು ಮಾತ್ರ ನಡೆಯಲಿವೆ.

ಪರೀಕ್ಷಾ ಸಮಯ ಮತ್ತು ವಿಧಾನ

ಸಮಯ:ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ (ಒಟ್ಟು 3 ಗಂಟೆಗಳು).

ಪತ್ರಿಕೆಗಳು:  ಪತ್ರಿಕೆ-1 (100 ಅಂಕಗಳ ಸಾಮಾನ್ಯ ಜ್ಞಾನ) ಮತ್ತು ಪತ್ರಿಕೆ-2 (200 ಅಂಕಗಳ ವಿಷಯವಾರ ಪತ್ರಿಕೆ) – ಎರಡೂ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆಲೇ ನೀಡಲಾಗುತ್ತದೆ.

ಒಎಂಆರ್ (OMR) ನಿಯಮ: ಎರಡೂ ಪತ್ರಿಕೆಗಳಿಗೆ ಪ್ರತ್ಯೇಕ ಒಎಂಆರ್ ಶೀಟ್‌ಗಳನ್ನು ನೀಡಲಾಗುತ್ತಿದ್ದು, ಅಭ್ಯರ್ಥಿಗಳು ಎಚ್ಚರಿಕೆಯಿಂದ ಉತ್ತರಗಳನ್ನು ದಾಖಲಿಸಬೇಕೆಂದು ಪ್ರಾಧಿಕಾರ ಸಲಹೆ ನೀಡಿದೆ.

ಕಟ್ಟುನಿಟ್ಟಿನ ನಿಯಮ ಮತ್ತು ಸಿಸಿಟಿವಿ ಕಣ್ಗಾವಲು

ಪರೀಕ್ಷಾ ಅಕ್ರಮ ತಡೆಯಲು ಕೆಇಎ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.  ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ (Dress Code) ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳನ್ನು ಮುಖ ಚಹರೆ ಪತ್ತೆ (Facial Recognition System) ತಂತ್ರಜ್ಞಾನದ ಮೂಲಕ ತೀವ್ರ ತಪಾಸಣೆಗೆ ಒಳಪಡಿಸಿ ಒಳಗೆ ಬಿಡಲಾಗುತ್ತದೆ. ಸುರಕ್ಷತೆಗಾಗಿ ಅಗತ್ಯ ಪೊಲೀಸ್ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಸಂಪೂರ್ಣ ಪರೀಕ್ಷೆಯು ಕ್ಯಾಮೆರಾ ಕಣ್ಗಾವಲಿನಲ್ಲಿ  ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

#KSET #KSETParikshe #KEA #KarnatakaNews #KSET2026 #KSETEksam #BengaluruNews #KarnatakaExamUpdates #UdayakalaNews #Udayakala

Related Posts

Leave a Reply

Your email address will not be published. Required fields are marked *